ದೇಶದಲ್ಲಿ 1ಲಕ್ಷ ಜನರಿಗೆ 137 ಪೊಲೀಸ್ ಸಿಬ್ಬಂದಿ

Update: 2017-04-12 14:28 GMT

ಹೊಸದಿಲ್ಲಿ, ಎ.12: ದೇಶದಲ್ಲಿ ಪ್ರತೀ ಒಂದು ಲಕ್ಷ ಜನರ ರಕ್ಷಣೆಗಾಗಿ 137 ಪೊಲೀಸ್ ಸಿಬ್ಬಂದಿಗಳಿದ್ದಾರೆ ಎಂದು ಸರಕಾರ ಸಂಸತ್ತಿನಲ್ಲಿ ತಿಳಿಸಿದೆ.
ಅಲ್ಲದೆ ವಿವಿಧ ವಿಭಾಗಗಳಡಿ 298 ವಿಐಪಿ, ವಿವಿಐಪಿಗಳಿಗೆ ಕೇಂದ್ರೀಯ ಭದ್ರತೆ ವ್ಯವಸ್ಥೆ ಒದಗಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಬ್ಯೂರೊ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಪ್ರಕಟಿಸಿದ ವರದಿಯ ಮಾಹಿತಿಯನ್ನು ಸಹಾಯಕ ಗೃಹ ಸಚಿವ ಹಂಸರಾಜ್ ಜಿ.ಆಹಿರ್ ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ನೀಡಿದರು. 2016ರ ಜ.1ರ ಸಂದರ್ಭ ದೇಶದಲ್ಲಿ ಪೊಲೀಸ್- ಸಾರ್ವಜನಿಕ ಅನುಪಾತ (ಪ್ರತೀ ಲಕ್ಷ ಜನಸಂಖ್ಯೆಗೆ ) 180.59 ಎಂದು ತಿಳಿಸಲಾಗಿದೆ. ಅದಾಗ್ಯೂ, ನಿಜವಾದ ಅನುಪಾತ 137.11 ಆಗಿದೆ ಎಂದು ಸಚಿವರು ತಿಳಿಸಿದರು.

298 ವಿವಿಐಪಿ (ಅತೀ ಗಣ್ಯ ವ್ಯಕ್ತಿ)ಗಳು ಕೇಂದ್ರೀಯ ಭದ್ರತೆ ವ್ಯವಸ್ಥೆಯಡಿ, 26 ಮಂದಿ ‘ಝಡ್ ಪ್ಲಸ್’, 58 ‘ಝಡ್’, 144 ‘ವೈ ಪ್ಲಸ್’, 2 ‘ವೈ’ ಕ್ಯಾಟಗರಿ ಮತ್ತು 68 ‘ಎಕ್ಸ್’ ಕ್ಯಾಟಗರಿ ಭದ್ರತೆ ಒದಗಿಸಲಾಗಿದೆ. ಅಲ್ಲದೆ ‘ಝಡ್ ಪ್ಲಸ್’ ವಿಭಾಗದಲ್ಲಿರುವ 14 ಗಣ್ಯರಿಗೆ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಯ ‘ಬ್ಲಾಕ್ ಕ್ಯಾಟ್’ ಕಮಾಂಡೊಗಳ ಭದ್ರತೆ ಒದಗಿಸಲಾಗಿದೆ ಎಂದವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News