×
Ad

ಬಡವರ ಹಣ ಬೇರೆಡೆಗೆ ಹರಿದುಹೋಗುತ್ತಿದೆ: ಸುಪ್ರೀಂಕೋರ್ಟ್ ದಿಗ್ಭ್ರಮೆ

Update: 2017-04-12 23:49 IST

ಹೊಸದಿಲ್ಲಿ,ಎ.12: ದೇಶದ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದು ಮೀಸಲಾಗಿದ್ದ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ರವಿವಾರ ತೀವ್ರ ಆಘಾತವನ್ನು ವ್ಯಕ್ತಪಡಿಸಿದೆ. ದೇಶದ ಕಡುಬಡವರಿಗೆ ದೊರೆಯಬೇಕಿದ್ದ ಹಣವು ಬೇರೆಡೆಗೆ ಹರಿದುಹೋಗುತ್ತಿದೆಯೆಂದು ಅದು ಹೇಳಿದೆ.

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆಂದು ನಿಗದಿಪಡಿಸಲಾಗಿರುವ ಸುಮಾರು 26 ಸಾವಿರ ಕೋಟಿ ರೂ.ಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚವಾಗಿದ್ದು, ಅದು ಎಲ್ಲಿಗೆ ಹೋಗಿದೆಯೆಂಬ ಬಗ್ಗೆ ಯಾವುದೇ ದಾಖಲೆಯಿಲ್ಲದಿರುವ ಗಮನಸೆಳೆದ ನ್ಯಾಯಾಲಯವು, ಈ ಬಗ್ಗೆ ಎರಡು ವಾರಗಳೊಳಗೆ ವರದಿಯೊಂದನ್ನು ಸಲ್ಲಿಸುವಂತೆ ಮಹಾಲೇಖಪಾಲ (ಸಿಎಜಿ) ಅವರಿಗೆ ಸೂಚನೆ ನೀಡಿದೆ.
 ‘‘ಈ 26 ಸಾವಿರ ರೂ.ನ ಪೈಕಿ, 5 ಸಾವಿರ ಕೋಟಿ ರೂ. ಖರ್ಚಾಗಿದೆ. ಈ ಹಣವು ಎಲ್ಲಿಗೆ ಹೋಗಿದೆಯೆಂಬುದು ನಮಗೆ ತಿಳಿದಿಲ್ಲ. ಅದನ್ನು ಚಹಾ ಅಥವಾ ಊಟಕ್ಕಾಗಿ ಖರ್ಚು ಮಾಡಲಾಗಿಲ್ಲವೆಂಬುದನ್ನು ನೀವು ಖಾತರಿಪಡಿಸಬೇಕಿದೆ’’ ನ್ಯಾಯಾಧೀಶರಾದ ಎಂ.ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮಣೀಂದರ್‌ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಈ ಬಗ್ಗೆ ನ್ಯಾಯಪೀಠದ ಮುಂದೆ ಸ್ಪಷ್ಟೀಕರಣ ನೀಡಿದ ಮಣೀಂದರ್‌ಸಿಂಗ್ ಅವರು, ಹಣ ಕಣ್ಮರೆಯಾಗಿಲ್ಲ, ಅದು ರಾಜ್ಯ ಸರಕಾರಗಳ ಬಳಿ ಉಳಿದುಕೊಂಡಿದೆ ಎಂದರು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಾಲಿನ್ ಗೋನ್ಸಾಲ್ವಿಸ್ ಅವರು, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದು ನಿಗದಿಪಡಿಸಲಾಗಿದ್ದ ದೊಡ್ಡ ಮೊತ್ತದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆಯೆಂದು ಆರೋಪಿಸಿದ್ದರು.ಕಾರ್ಮಿಕರ ಯೋಗಕ್ಷೇಮಕ್ಕಾಗಿ ವ್ಯಯಿಸಬೇಕಾಗಿದ್ದ ಈ ಹಣವನ್ನು ‘ಬಾಬೂಗಳು’ (ಉನ್ನತ ಅಧಿಕಾರಿಗಳು) ಹಾಗೂ ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿರುವ ಬಗ್ಗೆ ಖರ್ಚು ಮಾಡುತ್ತಿರುವುದು ಅರ್ಥಹೀನವೆಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.ನ್ಯಾಯಪೀಠವು ಮುಂದಿನ ಆಲಿಕೆಯನ್ನು ಮೇ 5ಕ್ಕೆ ನಿಗದಿಪಡಿಸಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ರಿಯಲ್ ಎಸ್ಟೇಟ್ ಕಂಪೆನಿಗಳ ಮೇಲೆ ವಿಧಿಸಲಾಗುತ್ತಿರುವ ಸೆಸ್ ಹಣವು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲವೆಂದು ಆರೋಪಿಸಿ ಎನ್‌ಜಿಓ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಲಿಕೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News