2018-19ರ ಸಾಲಿನಲ್ಲಿ ‘ನೀಟ್‘ ಪರೀಕ್ಷೆಗೆ ಉರ್ದು ಸೇರ್ಪಡೆ: ಸುಪ್ರೀಂ ನಿರ್ದೇಶನ
ಹೊಸದಿಲ್ಲಿ, ಎ.13: ಮುಂದಿನ (2018-19ರ) ವರ್ಷದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ಉರ್ದು ಭಾಷೆಯಲ್ಲೂ ಬರೆಯಲು ಅವಕಾಶ ಮಾಡಿಕೊಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ವರ್ಷದ ‘ನೀಟ್’ ಪರೀಕ್ಷೆಯನ್ನು ಉರ್ದು ಭಾಷೆಯಲ್ಲಿ ಬರೆಯಲು ಸಾಧ್ಯವಾಗದು.
ಉರ್ದು ಭಾಷೆಯಲ್ಲೂ ‘ನೀಟ್’ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ(ಎಸ್‌ಐಒ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಉರ್ದು ಭಾಷೆ ಮುಸ್ಲಿಂ ಧರ್ಮದೊಂದಿಗೆ ಸಂಬಂಧ ಹೊಂದಿರುವ ಕಾರಣ ಸರಕಾರಿ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಮತ್ತು ಉದ್ದೇಶಪೂರ್ವಕವಾಗಿ ಉರ್ದು ಭಾಷೆಯಲ್ಲಿ ‘ನೀಟ್’ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಥೌಸೀಫ್ ಅಹಮದ್ ತಿಳಿಸಿದ್ದರು.
2018ರ ವರ್ಷದಿಂದ ಉರ್ದು ಭಾಷೆಯಲ್ಲಿ ‘ನೀಟ್’ ಪರೀಕ್ಷೆ ಬರೆಯಲು ಅನುಮತಿ ನೀಡುವ ಕುರಿತ ಸಲಹೆ ಸ್ವೀಕರಿಸಲು ತಾನು ಮುಕ್ತನಾಗಿದ್ದೇನೆ ಎಂದು ಕಳೆದ ತಿಂಗಳು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಆದರೆ ಈ ವರ್ಷದ ಪರೀಕ್ಷೆಗೆ ಉರ್ದು ಭಾಷೆಯನ್ನು ಸೇರ್ಪಡೆಗೊಳಿಸುವುದು ಕಾರ್ಯಸಾಧ್ಯವಲ್ಲ ಎಂದೂ ತಿಳಿಸಿತ್ತು.
ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ , ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸಂಬಂಧಿತ ರಾಜ್ಯಗಳಿಂದ ಕೋರಿಕೆ ಸಲ್ಲಿಸಲ್ಪಟ್ಟರೆ ಯಾವುದೇ ಭಾಷೆಯನ್ನೂ ಸೇರ್ಪಡೆಗೊಳಿಸಲು ತನ್ನ ಅಭ್ಯಂತರ ಇಲ್ಲ ಎಂದು ಎಂಸಿಐ ತಿಳಿಸಿತ್ತು.