×
Ad

ಧರ್ಮಾಧಾರಿತ ಮೀಸಲಾತಿಯಿಂದ ಮತಾಂತರಕ್ಕೆ ಪ್ರೋತ್ಸಾಹ: ವೆಂಕಯ್ಯನಾಯ್ಡು

Update: 2017-04-15 12:29 IST

ಹೈದರಾಬಾದ್, ಎ. 15: ಧರ್ಮಾಧಾರಿತ ಮೀಸಲಾತಿ ಸಮಾಜದಲ್ಲಿ ಅಸ್ಥಿರತೆ ಹಾಗೂ ಇನ್ನೊಂದು ಪಾಕಿಸ್ತಾನಕ್ಕೂ ಕಾರಣವಾಗುತ್ತದೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಸರಕಾರ ಮುಸ್ಲಿಮರ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಿರುವುದು ವೆಂಕಯ್ಯ ನಾಯ್ಡು ಅವರನ್ನು ಕೆರಳಿಸಿದೆ. ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.

ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕೂಡಾ ವಿರೋಧಿಸಿದ್ದರು. ಮೀಸಲಾತಿ ಪ್ರಮಾಣ ಹೆಚ್ಚಿಸುವುದನ್ನು ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಮುಖ್ಯಮಂತ್ರಿಎ ನ್ನುವ ಕಾರಣದಿಂದ ಬಿಜೆಪಿ ವಿರೋಧಿಸುತ್ತಿಲ್ಲ. ಈ ಹಿಂದೆ ರಾಜಶೇಖರ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗಲೂ ಬಿಜೆಪಿ ವಿರೋಧಿಸಿತ್ತು ಎಂದು ವೆಂಕಯ್ಯನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧರ್ಮಾಧಾರಿತ ಮೀಸಲಾತಿ ಜನರನ್ನು ಜಾತೀಯವಾಗಿ ವಿಭಜಿಸಲು ಕಾರಣವಾಗುತ್ತದೆ. ಅದು, ದೇಶದೊಳಗೆ ಇನ್ನೊಂದು ದೇಶದ ಬೇಡಿಕೆಯಿಡಲು ಅವಕಾಶ ನೀಡಬಹುದು. ಅಂದರೆ , ಭಾರತದಲ್ಲಿ ಇನ್ನೊಂದು ಪಾಕಿಸ್ತಾನ ಸೃಷ್ಟಿಗೆ ಕಾರಣವಾಗುತ್ತದೆ ಎನ್ನುವುದು ವೆಂಕಯ್ಯ ನಾಯ್ಡು ಅಭಿಪ್ರಾಯವಾಗಿದೆ.

ಬಿಜೆಪಿ ನೀತಿಯನ್ನು ಸ್ಪಷ್ಟಪಡಿಸಿದ ಅವರು, ಇಡೀ ಭಾರತಕ್ಕೆ ಅನ್ವಯವಾಗುವಂತೆ ಸಾಮಾಜಿಕ ಮತ್ತು ಹಿಂದುಳಿಕೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂದು ಬಿಜೆಪಿ ಬಯಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News