ತನ್ನ ಅಧಿಕೃತ ನಕಾಶೆಯಲ್ಲಿ ಅರುಣಾಚಲ ಪ್ರದೇಶದ ಆರು ಸ್ಥಳಗಳ ಹೆಸರುಗಳನ್ನು ಬದಲಿಸಿದ ಚೀನಾ

Update: 2017-04-19 09:51 GMT

ಹೊಸದಿಲ್ಲಿ,ಎ.19: ಚೀನಾ ಏಕಪಕ್ಷೀಯವಾಗಿ ಅರುಣಾಚಲ ಪ್ರದೇಶದ ಆರು ಸ್ಥಳಗಳ ಹೆಸರುಗಳನ್ನು ಬದಲಿಸದ್ದು, ಇವುಗಳಿಗೆ ಚೀನಿ ಹೆಸರುಗಳನ್ನಿರಿಸಿದೆ. ಇದು ಈ ತಿಂಗಳ ಆರಂಭದಲ್ಲಿ ಈ ರಾಜ್ಯಕ್ಕೆ ಟಿಬೆಟಿಯನ್‌ರ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಅವರ ಭೇಟಿಯ ವಿರುದ್ಧ ಚೀನಾದ ಪ್ರತೀಕಾರದ ಮೊದಲ ಸಂಕೇತವಾಗಿರುವಂತಿದೆ.

ಈ ಪ್ರದೇಶದ ‘ಸಾರ್ವಭೌಮತೆ ’ಯನ್ನು ಭಾರತಕ್ಕೆ ತೋರಿಸಲು ಹೆಸರುಗಳನ್ನು ಬದಲಿಸಲಾಗಿದೆ ಎಂದು ಚೀನಾದ ಸರಕಾರಿ ಮಾಧ್ಯಮವು ಹೇಳಿದೆ. ವಿವಾದಿತ ಪ್ರದೇಶಕ್ಕೆ ಲಾಮಾ ಅವರ ಭೇಟಿಗೆ ಅವಕಾಶ ನೀಡುತ್ತಿರುವುದಕ್ಕಾಗಿ ಪರಿಣಾಮಗಳನ್ನೆದುರಿಸ ಬೇಕಾಗುತ್ತದೆ ಎಂದು ಚೀನಾ ಹಲವಾರು ಸಂದರ್ಭಗಳಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿತ್ತು.

ದಕ್ಷಿಣ ಟಿಬೆಟ್‌ನಲ್ಲಿಯ ಆರು ಸ್ಥಳಗಳ ಹೆಸರುಗಳನ್ನು ಚೀನಾ ಬದಲಿಸಿದೆ. ಈ ಪ್ರದೇಶವು ಚೀನಾದ ಭೂಭಾಗವಾಗಿದೆಯಾದರೂ ಕೆಲವು ಭಾಗಗಳು ಭಾರತದ ನಿಯಂತ್ರಣದಲ್ಲಿವೆ ಎಂದು ಸರಕಾರಿ ಮಾಧ್ಯಮವು ಹೇಳಿದೆ.

ಸ್ವಾಯತ್ತ ಟಿಬೆಟ್ ಪ್ರದೇಶದೊಂದಿಗೆ ಧಾರ್ಮಿಕವಾಗಿ ನಿಕಟ ನಂಟು ಹೊಂದಿರುವ ಅರುಣಾಚಲ ಪ್ರದೇಶದ ಹೆಚ್ಚಿನ ಭಾಗಗಳು ದಕ್ಷಿಣ ಟಿಬೆಟ್ ಎಂದು ಚೀನಾ ಪ್ರತಿಪಾದಿಸುತ್ತಿದೆ ಮತ್ತು ದಲಾಯಿ ಲಾಮಾರನ್ನು ಚೀನದ ಮುಖ್ಯಭೂಮಿಯೊಳಗೆ ಸ್ವತಂತ್ರ ಟಿಬೆಟ್‌ನ್ನು ರೂಪಿಸಲು ಪ್ರಯತ್ನಿಸುತ್ತಿರುವ ಪ್ರತ್ಯೇಕತಾವಾದಿ ಎಂದು ಬಣ್ಣಿಸಿದೆ.

ಚೀನಾದ ಅಧಿಕೃತ ನಕಾಶೆಗಳಲ್ಲಿ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದೇ ತೋರಿಸಲಾಗುತ್ತಿದೆ.

ರೋಮನ್ ಅಕ್ಷರಮಾಲೆಯನ್ನು ಬಳಸಿ ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ವೋಗ್ಯಾನ್ಲಿಂಗ್,ಮಿಲಾ ರಿ,ಕಿಡೆಂಗಾರ್ಬೊ ರಿ, ಮೈಂಕುಕಾ, ಬುಮೊ ಲಾ ಮತ್ತು ನಮ್ಕಾಪಬ್ ರಿ ಎಂದು ನಾಮಕರಣ ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.

ದಲಾಯಿ ಲಾಮಾ ಅವರ ಒಂಭತ್ತು ದಿನಗಳ ಅರುಣಾಚಲ ಪ್ರದೇಶ ಪ್ರವಾಸವು ಎ.12ರಂದು ಅಂತ್ಯಗೊಂಡಿದ್ದು, ಮರುದಿನವೇ ಈ ಹೊಸ ಹೆಸರುಗಳನ್ನಿಡಲಾಗಿದೆ. ಹೆಸರುಗಳ ಬದಲಾವಣೆಯು ಚೀನಾ ತನ್ನ ನಿಲುವನ್ನು ಕಠಿಣಗೊಳಿಸುತ್ತಿದೆ ಮತ್ತು ಅರುಣಾಚಲ ಪ್ರದೇಶ,ವಿಶೇಷವಾಗಿ ತವಾಂಗ್ ತನ್ನದೆನ್ನುವ ಪ್ರತಿಪಾದನೆಗೆ ಒತ್ತು ನೀಡುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News