ಫೇಸ್ ಬುಕ್, ಜೈಲು, ಮದುವೆ ...

Update: 2017-04-21 10:50 GMT

 ಧನಬಾದ್(ಜಾರ್ಖಂಡ್),ಎ.21: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎನ್ನುವುದು ಹಳೆಯ ನಾಣ್ಣುಡಿ.ಆದರೆ ಇಲ್ಲೊಂದು ಮದುವೆಗೆ ಪೀಠಿಕೆಯಾದ ಪ್ರೇಮ ಅಂತರ್ಜಾಲದಲ್ಲಿ ಹುಟ್ಟಿ ಜೈಲಿನಲ್ಲಿ ಅರಳಿದೆ.

 ವಿವಾಹ ನೋಂದಣಿ ಕಚೇರಿಗೆ ಮದುಮಗ ಕೈಕೋಳ ತೊಟ್ಟು ಪೊಲೀಸ್ ವ್ಯಾನಿನಲ್ಲಿ ಬಂದರೆ, ಮದುಮಗಳು ಹೆತ್ತವರ ಜೊತೆ ಕಾರಿನಲ್ಲಿ ಬಂದಿದ್ದಳು. ಅವರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ವಿವಾಹ ನೋಂದಣಾಧಿಕಾರಿಗಳು ಅವರಿಬ್ಬರನ್ನೂ ಸತಿ-ಪತಿಗಳೆಂದು ಘೋಷಿಸಿದರು.
 ಅಂದ ಹಾಗೆ ಇದು ಸಾಮಾನ್ಯವಾಗಿ ನಡೆದ ಮದುವೆಯಲ್ಲ. ಅವರಿಬ್ಬರೂ ಫೇಸ್‌ಬುಕ್‌ನಲ್ಲಿ ಪರಸ್ಪರ ಪ್ರೇಮದಲ್ಲಿ ಬಿದ್ದಿದ್ದರು. ಹುಡುಗ ಮದುವೆಗೆ ನಿರಾಕರಿಸಿದಾಗ ಹುಡುಗಿ ಅವನನ್ನು ಜೈಲಿಗೆ ಕಳುಹಿಸಿದ್ದಳು. ಆದರೆ ಹುಡುಗನಲ್ಲಿ ಹೃದಯ ಪರಿವರ್ತನೆಯಾಗಿದ್ದು, ಗುರುವಾರ ಧನಬಾದ್‌ನಲ್ಲಿ ಮದುವೆಯಾಗಿದ್ದಾರೆ.

 ಸಾಮಾನ್ಯವಾಗಿ ಮದುವೆಯ ಬಳಿಕ ನವದಂಪತಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಜೊತೆಯಾಗಿ ಸಾಗುತ್ತಾರೆ. ಇಲ್ಲಿ ಮಾತ್ರ ಅವರಿಬ್ಬರ ದಾರಿಗಳು ಭಿನ್ನವಾಗಿದ್ದವು. ಬಿಹಾರ ಮೂಲದ ಇಂಜಿನಿಯರ್ ರಿತೇಶ್ ಕುಮಾರ್(28) ಜೈಲಿಗೆ ಮರಳಿದರೆ, ಸುದೀಪ್ತಿ ಕುಮಾರಿ (23) ಹೆತ್ತವರೊಂದಿಗೆ ಮನೆಗೆ ವಾಪಸಾಗಿದ್ದಾಳೆ.

 ತನ್ನ ಮಗಳ ಭಾವನೆಗಳನ್ನು ಮತ್ತು ರಿತೇಶ್‌ಗಾಗಿ ಅವಳ ಪ್ರೀತಿಯನ್ನು ತಾನು ಗೌರವಿಸುತ್ತೇನೆ ಎಂದು ವಧುವಿನ ತಂದೆ ಹರಧನ್ ಮಹಾಲಿ ಸುದ್ದಿಗಾರರಿಗೆ ತಿಳಿಸಿದರು.
ಮದುವೆ ಪ್ರಸ್ತಾವ ಬಂದಾಗ ಇಲ್ಲವೆನ್ನಲು ನನಗೆ ಸಾಧ್ಯವಾಗಲಿಲ್ಲ. ಅವರಿಬ್ಬರನ್ನೂ ಆದಷ್ಟು ಬೇಗ ಒಂದಾಗಿಸುವುದು ನನ್ನ ಈಗಿನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

 ಸೋಮವಾರ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದ್ದು, ಅಂದು ಈ ನವದಂಪತಿ ಕೊನೆಗೂ ಒಂದಾಗಬಹುದು.
ಅವರಿಬ್ಬರದೂ ಪ್ರೇಮ-ದ್ವೇಷ-ಪ್ರೇಮದ ಸಂಬಂಧವಾಗಿದ್ದು, ಬಹಳಷ್ಟು ಏಳುಬೀಳುಗಳ ಬಳಿಕ ಮದುವೆಯಲ್ಲಿ ಸುಖಾಂತ್ಯಗೊಂಡಿದೆ ಎಂದು ಕುಟುಂಬದ ಸದಸ್ಯರು ಹೇಳಿದರು.

2012ರಲ್ಲಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದ ಈ ಜೋಡಿ ಮುಖತಃ ಭೇಟಿಯಾಗುವವರೆಗೆ ಗಂಟೆಗಟ್ಟಲೆ ಕಾಲ ಚಾಟಿಂಗ್‌ನಲ್ಲಿ ತೊಡಗಿದ್ದರು. ತಾವಿಬ್ಬರೂ ಪರಸ್ಪರ ಪ್ರೇಮದ ಸುಳಿಗೆ ಸಿಲುಕಿದ್ದೇವೆ ಎನ್ನುವುದು ಅವರಿಗೆ ಶೀಘ್ರವೇ ಗೊತ್ತಾಗಿತ್ತು. ಬಿಹಾರದ ಕಹಲ್‌ಗಾಂವ್‌ನಲ್ಲಿಯ ನ್ಯಾಷನಲ್ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ ಇಂಜಿನಿಯರ್ ಆಗಿರುವ ರಿತೇಶ್ ಅವಳನ್ನು ನೋಡಲೆಂದೇ ಆಗಾಗ್ಗೆ ಧನಬಾಗ್‌ಗೆ ಬರುತ್ತಿದ್ದ.
ದೇವಸ್ಥಾನವೊಂದರಲ್ಲಿ ಅವರು ಗುಟ್ಟಾಗಿ ಮದುವೆಯನ್ನೂ ಆಗಿದ್ದರು. ಆದರೆ ತನ್ನನ್ನು ವಿಧ್ಯುಕ್ತವಾಗಿ ಮದುವೆಯಾಗುವಂತೆ ದಲಿತ ವರ್ಗಕ್ಕೆ ಸೇರಿದ ಸುದೀಪ್ತಿ ಹೇಳಿದಾಗ ತಾನು ಈ ಈ ಮದುವೆಯಾದರೆ ತನ್ನ ತಾಯಿ ಅನಿತಾ ದೇವಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ನೆಪವೊಡ್ಡಿ ರಿತೇಶ ನಿರಾಕರಿಸಿದ್ದ.

ತನಗೆ ವಂಚನೆಯಾಯಿತು ಎಂದು ಭಾವಿಸಿದ ಸುದೀಪ್ತಿ 2017,ಫೆಬ್ರುವರಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಿತೇಶ್ ವಿರುದ್ಧ ಲೈಂಗಿಕ ಕಿರುಕುಳ ದೂರನ್ನು ದಾಖಲಿಸಿದ್ದಳು. ಕಹಲ್‌ಗಾಂವ್‌ಗೆ ತೆರಳಿದ್ದ ಪೊಲೀಸರು ರಿತೇಶ್‌ನನ್ನು ಬಂಧಿಸಿ ಕರೆತಂದು ಜೈಲಿಗೆ ತಳ್ಳಿದ್ದರು.

 ಆದರೆ ಕಥೆ ಅಲ್ಲಿಗೇ ಅಂತ್ಯವಾಗಲಿಲ್ಲ.ಸುದೀಪ್ತಿ ಮನಸ್ಸು ಬದಲಾಯಿಸಿಕೊಂಡಿದ್ದಳು ಮತ್ತು ಆಗಾಗ್ಗೆ ಜೈಲಿಗೆ ತೆರಳಿ ರಿತೇಶ್‌ನನ್ನು ಭೇಟಿಯಾಗುತ್ತಿದ್ದಳು.ವಾರಗಳ ಬಳಿಕ ರಿತೇಶ್ ಮದುವೆಯ ಪ್ರಸ್ತಾವವನ್ನು ಮುಂದಿರಿಸಿದ್ದು, ಅದನ್ನಾಕೆ ಒಪ್ಪಿಕೊಂಡಿದ್ದಳು.

 ರಿತೇಶ್ ಕಳೆದ ತಿಂಗಳು ಜೈಲಿನಿಂದಲೇ ನ್ಯಾಯಾಲಯದ ಮೂಲಕ ಮದುವೆಗೆ ಅರ್ಜಿಯನ್ನು ಸಲ್ಲಿಸಿದ್ದ.ಅಗತ್ಯ ಅನುಮತಿಗಳ ಬಳಿ ಎರಡೂ ಕುಟುಂಬಗಳು ಒಂದಾಗಿ ಗುರುವಾರ ರಿತೇಶ ಮತ್ತು ಸುದೀಪ್ತಿ ಮದುವೆಯನ್ನು ನೆರವೇರಿಸಿವೆ.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News