ದೇಶದಲ್ಲಿ ಪಶುಗಳ ಚರ್ಮ ಸಾಗಣೆಗೆ ಅಡ್ಡಿ: ಚರ್ಮ ರಫ್ತು ಮಾಡುವ ಸಂಸ್ಥೆಗಳು ಸಂಕಷ್ಟದಲ್ಲಿ

Update: 2017-04-21 14:43 GMT

ಕೋಲ್ಕತಾ, ಎ.21: ಗೋವುಗಳ ವಧೆಗೆ ಕೆಲವು ರಾಜ್ಯಗಳಲ್ಲಿ ನಿಷೇಧ ಹೇರಿದ ಪರಿಣಾಮ ದೇಶದ ಕೆಲವು ಬೃಹತ್ ಚರ್ಮ ಉತ್ಪನ್ನಗಳ ರಫ್ತು ಮಾಡುವ ಕಾರ್ಖಾನೆಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.

ಪಶುಗಳ ಚರ್ಮವನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಅಡ್ಡಿ ಇರುವ ಕಾರಣ ಚರ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ದೇಶದ ಕೆಲವು ಬೃಹತ್ ಕಾರ್ಖಾನೆಗಳು ಈಗ ಹಸುಗಳ ಕಚ್ಚಾ ಚರ್ಮವನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿದೆ.

ಉತ್ತಮ ಗುಣಮಟ್ಟದ ಕಚ್ಚಾ ಚರ್ಮವನ್ನು ಸ್ಥಳೀಯವಾಗಿ ಪಡೆಯುವುದು ಈಗ ಸಮಸ್ಯೆಯಾಗಿದೆ. ಆದ್ದರಿಂದ ಬೃಹತ್ ರಫ್ತು ಸಂಸ್ಥೆಗಳು ಆಪ್ರಿಕಾ, ಬ್ರೆಝಿಲ್, ಮೆಕ್ಸಿಕೊ, ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಿಂದ ಕಚ್ಚಾ ಚರ್ಮ ಆಮದು ಮಾಡಿಕೊಳ್ಳುತ್ತಿವೆ ಎಂದು ಪೂರ್ವ ರಾಜ್ಯಗಳ ಚರ್ಮ ರಫ್ತುದಾರರ ಸಮಿತಿಯ ಅಧ್ಯಕ್ಷ ರಮೇಶ್ ಜುನೇಜಾ ತಿಳಿಸಿದ್ದಾರೆ.

  ಪ್ರಾಣಿಗಳ ವಧೆಗೆ ನಿಷೇಧ ಇಲ್ಲದ ಉ.ಪ್ರ. ಮತ್ತು ಪಂಜಾಬಿನಲ್ಲಿ ಕೋಣಗಳ ಚರ್ಮ ದೊರೆಯುತ್ತದೆ. ಆದರೆ ಇದನ್ನು ಸಾಗಿಸುವುದೇ ಸಮಸ್ಯೆಯಾಗಿದೆ. ಕೆಲವು ಸಂಘಟನೆಗಳು ಅನವಶ್ಯಕ ತೊಂದರೆ ಸೃಷ್ಟಿಸುತ್ತವೆ . ಮುದಿ ಹಸುಗಳು ಅಥವಾ ನೈಸರ್ಗಿಕವಾಗಿ ಸತ್ತ ಹಸುಗಳ ಚರ್ಮವನ್ನೂ ಸಾಗಿಸಲು ಬಿಡುತ್ತಿಲ್ಲ ಎಂದು ಅವರು ಹೇಳುತ್ತಾರೆ.

     ಪ.ಬಂಗಾಲ ಮತ್ತು ಕೇರಳದಲ್ಲಿ ಮುದಿ ಅಥವಾ ಹಾಲು ಕೊಡದ ದನಗಳ ವಧೆಗೆ ನಿಷೇಧ ಹೇರಲಾಗಿಲ್ಲ. ಆದ್ದರಿಂದ ದನದ ಚರ್ಮವನ್ನು ಆಮದು ಮಾಡಿಕೊಳ್ಳುವುದೇ ಈಗ ಇರುವ ಏಕೈಕ ಆಯ್ಕೆಯಾಗಿದೆ ಎಂದು ಜುನೇಜಾ ಹೇಳಿದ್ದಾರೆ. ಚರ್ಮದ ರಫ್ತಿನಿಂದ ದೇಶಕ್ಕೆ ವಾರ್ಷಿಕ 13 ಬಿಲಿಯನ್ ಡಾಲರ್‌ಗಳಷ್ಟು ಆದಾಯವಿದೆ. ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಚರ್ಮ ರಫ್ತಿನಲ್ಲಿ ಶೇ.20ರಷ್ಟು ಇಳಿಕೆ ದಾಖಲಾಗಿದೆ. ಹೀಗೆಯೇ ಮುಂದುವರಿದರೆ ಮುಂದಿನ ಐದು ವರ್ಷಗಳಲ್ಲಿ 27 ಬಿಲಿಯನ್ ಡಾಲರ್ ಮೊತ್ತದ ಚರ್ಮದ ರಫ್ತು ಸಾಧಿಸುವ ಗುರಿ ತಲುಪಲು ಸಾಧ್ಯವಾಗದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News