×
Ad

ರಾಜಕಾರಣಿಯ ಸಂಬಂಧಿಗಳಿಗೆ ದಂಡ ವಿಧಿಸಲು ಮುಂದಾಗಿದ್ದ ಪೊಲೀಸ್‌ಗೆ ಥಳಿತ

Update: 2017-04-22 23:26 IST

ಗುನಾ(ಮ.ಪ್ರ),ಎ.22: ಇದು ಶನಿವಾರ ಮಧ್ಯಾಹ್ನ ಗುನಾದ ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್)ಯ ಹೊರಗೇ ನಡೆದಿರುವ ಘಟನೆ. 4-5 ಜನರ ಗುಂಪು ಪೊಲೀಸ್ ಕಾನ್‌ಸ್ಟೇಬಲ್ ಅಶುತೋಷ್ ತಿವಾರಿಯನ್ನು ನೆಲಕ್ಕೆ ಕೆಡವಿ ಮುಷ್ಟಿಗಳಿಂದ ಗುದ್ದುತ್ತ ಕಾಲುಗಳಿಂದ ತುಳಿಯುತ್ತಿದ್ದರೆ ಉಳಿದವರು ಇದರ ಮಜಾ ತೆಗೆದುಕೊಳ್ಳುತ್ತಿದ್ದರು. ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಣಗೊಂಡಿರುವ ಈ ಅಮಾನುಷ ಹಲ್ಲೆಯ ನೇತೃತ್ವ ವಹಿಸಿದ್ದವರು ಸ್ಥಳಿಯ ಬಿಜೆಪಿ ನಾಯಕಿಯ ಕುಟುಂಬ ಸದಸ್ಯರು.

ಬಿಜೆಪಿ ಬ್ಲಾಕ್ ಅಧ್ಯಕ್ಷೆ ಶೋಭನಾ ರಘುವಂಶಿಯವರ ಸಂಬಂಧಿಗಳಾದ ಮೂವರು ಯುವತಿಯರು ಹೆಲ್ಮೆಟ್‌ಗಳನ್ನು ಧರಿಸದೇ ಒಂದೇ ಸ್ಕೂಟರ್‌ನಲ್ಲಿ ಪ್ರಯಾಣಿಸು ತ್ತಿದ್ದರು. ಪಿಸಿಆರ್ ಹೊರಗಿದ್ದ ತಿವಾರಿ ಈ ಯುವತಿಯರನ್ನು ತಡೆದು ನಿಲ್ಲಿಸಿ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲು ಮುಂದಾಗಿದ್ದರು. ಯುವತಿಯರು ತಮ್ಮ ಕುಟುಂಬ ಸದಸ್ಯರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದ್ದರು.

 ಕೆಲವೇ ಕ್ಷಣಗಳಲ್ಲಿ ಈ ಯುವತಿಯರ ಚಿಕ್ಕಪ್ಪ ಹಾಗೂ ಶೋಭನಾರ ಪತಿ ರಾಜೀವ ರಘುವಂಶಿ ತನ್ನ ಬೆಂಬಲಿಗರ ಜೊತೆ ಆಗಮಿಸಿ ತಿವಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಹೋದ್ಯೋಗಿಗಳು ಮಧ್ಯ ಪ್ರವೇಶಿಸಿ ರಕ್ಷಿಸದಿದ್ದರೆ ತಿವಾರಿಯವರ ಕಥೆ ಏನಾಗುತ್ತಿತ್ತೋ?

ತಿವಾರಿಯವರ ರಕ್ಷಣೆಗೆ ಧಾವಿಸಿದ್ದ ಸಹೋದ್ಯೋಗಿ ಪೊಲೀಸರಿಗೆ ರಘುವಂಶಿ ಬೆದರಿಕೆಯೊಡ್ಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯೊಡ್ಡಿದ್ದಕ್ಕಾಗಿ ಮತ್ತು ಹಲ್ಲೆ ನಡೆಸಿದ್ದಕ್ಕಾಗಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರಾದರೂ ರಾಜೀವ ರಘುವಂಶಿಯವರನ್ನು ಮುಟ್ಟಲು ಮುಂದಾಗಿಲ್ಲ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News