ಕಾಶ್ಮೀರ ಬಿಕ್ಕಟ್ಟು ಪರಿಹಾರಕ್ಕೆ ವಾಜಪೇಯಿ ಸೂತ್ರ: ಮುಫ್ತಿ ಒಲವು

Update: 2017-04-24 14:23 GMT

 ಹೊಸನಗರ,ಎ.24: ಕಾಶ್ಮೀರ ಬಿಕ್ಕಟ್ಟಿಗೆ ಸಂಬಂಧಿಸಿ ಸಂಬಂಧಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ತಳೆದಿದ್ದ ನಿಲುವನ್ನು ತುರ್ತಾಗಿ ಅನುಸರಿಸಬೇಕಾದ ಅಗತ್ಯವಿದೆಯೆಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಸೋಮವಾರ ಪ್ರಧಾನಿಯನ್ನು ಭೇಟಿಯಾಗಿ 40 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘‘ ಕಲ್ಲೆಸೆತ ಹಾಗೂ ಗೋಲಿಬಾರ್ ಅವ್ಯಾಹತವಾಗಿ ನಡೆಯುತ್ತಿರುವ ಸಮಯದಲ್ಲಿ ಶಾಂತಿ ಮಾತುಕತೆ ಅಸಾಧ್ಯ. ಆದರೆ ಪ್ರಧಾನಿಯವರು ಮಾತುಕತೆಯ ಸಂದರ್ಭದಲ್ಲಿ ಹಲವಾರು ಸಲ ಮಾಜಿ ಪ್ರಧಾನಿ ವಾಜಪೇಯಿಯವರನ್ನು ಸ್ಮರಿಸಿಕೊಂಡರು. ಕಾಶ್ಮೀರ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ವಾಜಪೇಯಿ ಸಾಧಿಸಿದಲ್ಲಿಂದ ಮತ್ತೆ ಹೊಸದಾಗಿ ಆರಂಭಿಸುವ ಅಗತ್ಯವಿದೆ’’ ಎಂದು ಹೇಳಿದರು.

ಭದ್ರತಾಪಡೆಗಳ ಗುಂಡಿನ ದಾಳಿಗಳು ಪ್ರತಿಭಟನಕಾರರ ಹಿಂಸಾಚಾರಕ್ಕಿಳಿಯುವಂತೆ ಪ್ರಚೋದಿಸುತ್ತವೆ ಎಂದು ಅಭಿಪ್ರಾಯಿಸಿದ ಅವರು, ಕಾಶ್ಮೀರದಲ್ಲಿ ಕಲ್ಲೆಸೆತದಲ್ಲಿ ತೊಡಗಿರುವವರಲ್ಲಿ ಕೆಲವರು ಭ್ರಮನಿರಸನಗೊಂಡವರಾಗಿದ್ದರೆ, ಇನ್ನು ಕೆಲವರು ತಪ್ಪುದಾರಿಗೆಳೆಯಲ್ಪಟ್ಟವರಾಗಿದ್ದಾರೆ ಎಂದರು.

ಕಾಶ್ಮೀರ ಕುರಿತ ಮಾತುಕತೆಯು ವಾಜಪೇಯಿ ಪ್ರತಿಪಾದಿಸಿದ್ದ ಪ್ರಸಿದ್ಧ ‘‘ ಇನ್ಸಾನಿಯತ್, ಕಾಶ್ಮೀರಿಯತ್, ಜಮೂರಿಯತ್ (ಮಾನವೀಯತೆ, ಕಾಶ್ಮೀರಿತ್ವ, ಪ್ರಜಾತಂತ್ರ) ಬದ್ಧತೆಗಳ ಚೌಕಟ್ಟಿನೊಂದಿಗೆ ನಡೆಯಬೇಕೆಂದು ಮುಫ್ತಿ ಹಾಗೂ ಇತರ ಪಿಡಿಪಿ ನಾಯಕರು ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಕಾಶ್ಮೀರ ಮಾತುಕತೆಯಲ್ಲಿ ಪ್ರತ್ಯೇಕವಾದಿ ಹುರಿಯತ್ ನಾಯಕರನ್ನೂ ಒಳಪಡಿಸಬೇಕೆಂದು ಮುಪ್ತಿ ಬಯಸುತ್ತಿದ್ದರಾದರೂ, ಕೇಂದ್ರ ಸರಕಾರವು ಅದನ್ನು ತಿರಸ್ಕರಿಸಿದೆ.

ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆಯಿದೆಯೆಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಮುಫ್ತಿ, ಅದನ್ನು ಕೇಂದ್ರ ಸರಕಾರವೇ ನಿರ್ಧರಿಸಬೇಕಾಗಿದೆಯೆಂದರು.

ಪಿಡಿಪಿ ಸರಕಾರದ ವಜಾ ಸಾಧ್ಯತೆ ಇಲ್ಲ

  ಕಾಶ್ಮೀರ ಹಿಂಸಾಚಾರ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯಿದೆಯೆಂಬ ಬಗ್ಗೆ ವದಂತಿಗಳು ಹಬ್ಬಿದ್ದರೂ, ಕೇಂದ್ರ ಸರಕಾರದ ಕೆಲವು ಮೂಲಗಳ ಪ್ರಕಾರ, ಸದ್ಯಕ್ಕೆ ಅದು ಕೇಂದ್ರ ಸರಕಾರದ ಮುಂದಿಲ್ಲವೆನ್ನಲಾಗಿದೆ. ಜಮ್ಮುಕಾಶ್ಮೀರ ಸರಕಾರವನ್ನು ವಜಾಗೊಳಿಸಿದಲ್ಲಿ ಆಡಳಿತಾರೂಢ ಪಿಡಿಪಿ ಕೂಡಾ ಕೇಂದ್ರ ವಿರೋಧಿ ನಿಲುವನ್ನು ತಾಳಲಿದ್ದು, ಪರಿಸ್ಥಿತಿ ಇನ್ನಷ್ಟು ವಿಷಮಿಸುವ ಸಾಧ್ಯತೆಯಿದೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕೇಂದ್ರ ಮುಂದಿರುವ ಸಧ್ಯದ ಆಯ್ಕೆಯಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News