‘ಗೋರಕ್ಷಕರನ್ನು ನಿಯಂತ್ರಿಸದಿದ್ದರೆ ಹಿಂಸಾಚಾರದ ಸಾಧ್ಯತೆ’

Update: 2017-04-24 14:26 GMT
ಸಾಂದರ್ಭಿಕ ಚಿತ್ರ 

 ಜೈಪುರ, ಎ.24: ಮುಸ್ಲಿಂ ರೈತನೋರ್ವನ ಹತ್ಯೆ ಮಾಡಿದವರನ್ನು ಬಂಧಿಸುವಂತೆ 23 ನಿವೃತ್ತ ಸರಕಾರಿ ಅಧಿಕಾರಿಗಳು ಮುಖ್ಯಮಂತ್ರಿ ವಸುಂಧರಾ ರಾಜೆಯನ್ನು ಆಗ್ರಹಿಸಿದ್ದು ತಥಾಕಥಿತ ಗೋರಕ್ಷಕರಿಗೆ ಕಡಿವಾಣ ಹಾಕದಿದ್ದರೆ ಭಾರೀ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

 ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲು ಖಾನ್ ಎಂಬ ರೈತನನ್ನು ಅಲ್ವಾರ್‌ನಲ್ಲಿ ಎಪ್ರಿಲ್ 1ರಂದು ಥಳಿಸಿ ಹತ್ಯೆ ಮಾಡಿದ ಘಟನೆಯಿಂದ ವ್ಯಾಕುಲಗೊಂಡಿದ್ದು , ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಪೊಲೀಸ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಫಿರ್ಯಾದಿದಾರರು ಆಗ್ರಹಿಸಿದ್ದಾರೆ. ಈ ಅಧಿಕಾರಿಗಳು 1968ರ ಐಎಎಸ್ ಬ್ಯಾಚ್‌ಗೆ ಸೇರಿದವರು. ಖಾನ್ ಮತ್ತು ಇತರರು ಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಇವರ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಆದರೆ ಹೈನುಗಾರಿಕೆಯ ಉದ್ದೇಶದಿಂದ ಜಾನುವಾರು ಜಾತ್ರೆಯಲ್ಲಿ ಈ ಹಸುಗಳನ್ನು ಖರೀದಿಸಿರುವ ಬ್ಗೆ ಇವರಲ್ಲಿ ಪ್ರಮಾಣ ಪತ್ರ ಇತ್ತು.

ನಮ್ಮ ದೇಶದ ಮೂಲ ಧ್ಯೇಯ ಮತ್ತು ವೌಲ್ಯಗಳನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ಕೆಲವರು ಶಕ್ತರಾಗಿರುವುದು ಸ್ವಘೋಷಿತ ಗೋರಕ್ಷಕ ದಳದವರ ಸ್ವೇಚ್ಛಾವರ್ತನೆ ಗಮನಿಸಿದರೆ ಸ್ಪಷ್ಟವಾಗುತ್ತದೆ. ಪೆಹ್ಲುಖಾನ್ ಮರಣಹೇಳಿಕೆ ಆಧರಿಸಿ ರಾಜ್ಯ ಸರಕಾರ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.

 ರಾಜ್ಯ ಮತ್ತು ಕೇಂದ್ರ ಸರಕಾರದ ಕೆಲ ಅಧಿಕಾರಿಗಳು ತಮ್ಮ ನಿಷ್ಕ್ರಿಯತೆ ಮತ್ತು ವೌನ ಧೋರಣೆಯ ಮೂಲಕ ಗೋರಕ್ಷಕರ ಕಾರ್ಯಕ್ಕೆ ಪ್ರೇರಣೆ ನೀಡಿದ್ದಾರೆ. ಮುಖ್ಯಮಂತ್ರಿ ವಸುಂಧರಾ ರಾಜೆಯವರಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದೇವೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರು ಇತರರಿಗೆ ಮಾದರಿಯಾಗುತ್ತಾರೆ ಎಂಬ ನಿರೀಕ್ಷೆಯಿದೆ ಎಂದವರು ತಿಳಿಸಿದ್ದಾರೆ.

ದುಷ್ಕರ್ಮಿಗಳನ್ನು ಬಂಧಿಸುವ ಮೂಲಕ ಸಂತ್ರಸ್ತ ವ್ಯಕ್ತಿಯ ಕುಟುಂಬ ನ್ಯಾಯಾಂಗದ ಮೇಲಿಟ್ಟಿರುವ ನಂಬಿಕೆಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕಾನೂನು ಸ್ಥಿತಿ ಕುಸಿಯಲಿದ್ದು ಅರಾಜಕತೆಯ ಸ್ಥಿತಿ ನೆಲೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News