ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಛೋಟಾ ರಾಜನ್‌ಗೆ ಏಳು ವರ್ಷ ಜೈಲು

Update: 2017-04-25 14:46 GMT

ಹೊಸದಿಲ್ಲಿ,ಎ.25: ಇಲ್ಲಿಯ ವಿಶೇಷ ನ್ಯಾಯಾಲಯವು ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಮತ್ತು ಬೆಂಗಳೂರು ಪಾಸ್‌ಪೋರ್ಟ್ ಕಚೇರಿಯ ಮೂವರು ನಿವೃತ್ತ ಅಧಿಕಾರಿಗಳಿಗೆ ತಲಾ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಮಂಗಳವಾರ ಆದೇಶಿಸಿದೆ.

ವೌಲ್ಯಯುತವಾದ ಭದ್ರತೆ (ಪಾಸ್‌ಪೋರ್ಟ್)ಯ ನಕಲು ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದ್ದರೂ ವಿಶೇಷ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯಲ್ ಅವರು ಏಳು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿದರು. ಜಯಶ್ರೀ ದತ್ತಾತ್ರೆಯ ರಾಹತೆ, ದೀಪಕ್ ನಟವರಲಾಲ ಶಾ ಮತ್ತು ಲಲಿತಾ ಲಕ್ಷ್ಮಣನ್ ಅವರು ಶಿಕ್ಷೆಗೊಳಗಾದ ನಿವೃತ್ತ ಅಧಿಕಾರಿಗಳಾಗಿದ್ದಾರೆ.

ರಾಜನ್ ಈಗಾಗಲೇ ದಿಲ್ಲಿಯ ತಿಹಾರ ಜೈಲಿನಲ್ಲಿದ್ದು, ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದ ಇತರ ಮೂವರನ್ನು ಸೋಮವಾರ ಪ್ರಕರಣದ ತೀರ್ಪು ಘೋಷಣೆಯಾದ ಬಳಿಕ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಮಾ.28ರಂದು ನ್ಯಾಯಾಲಯವು ರಾಜನ್ ಮೂವರು ಸರಕಾರಿ ಅಧಿಕಾರಿಗಳ ನೆರವಿನಿಂದ ಕರ್ನಾಟಕದ ಮಂಡ್ಯದ ವಿಳಾಸವನ್ನು ನೀಡಿ ಮೋಹನ ಕುಮಾರ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದ ಈ ಪ್ರಕರಣದಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.

ಪ್ರಕರಣದಲ್ಲಿ ತನ್ನ ವಿರುದ್ಧದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಲಲಿತಾ ಲಕ್ಷ್ಮಣನ್ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯವು ಈ ವರ್ಷದ ಜನವರಿಯಲ್ಲಿ ತಿರಸ್ಕರಿಸಿತ್ತು.

27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ, ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹೀಮ್‌ನ ನಿಕಟವರ್ತಿಯಾಗಿದ್ದ ಛೋಟಾನ ವಿರುದ್ಧ ದಿಲ್ಲಿ ಮತ್ತು ಮುಂಬೈಗಳಲ್ಲಿ ಕೊಲೆ,ಹಫ್ತಾವಸೂಲಿ ಮತ್ತು ಮಾದಕ ದ್ರವ್ಯ ಸಾಗಾಣಿಕೆಯ 70ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 2015,ಅಕ್ಟೋಬರ್‌ನಲ್ಲಿ ಇಂಡೋನೇಷಿಯಾದ ಬಾಲಿಯಲ್ಲಿ ಬಂಧಿಸಲ್ಪಟಿದ್ದ ಆತನನ್ನು ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News