ಜೈಪುರ: ಜಾಹೀರಾತು ಚಿತ್ರತಂಡದ ಸೆಟ್ ಧ್ವಂಸ

Update: 2017-04-26 04:03 GMT

ಜೈಪುರ, ಎ.26: ಪದ್ಮಾವತಿ ಚಿತ್ರತಂಡದ ಸೆಟ್ ಧ್ವಂಸಗೊಳಿಸಿದ ಪ್ರಕರಣದ ನೆನಪು ಅಳಿಸುವ ಮುನ್ನವೇ ಮುಂಬೈ ಮೂಲದ ಚಿತ್ರ ನಿರ್ಮಾಣ ಸಂಸ್ಥೆಯೊಂದರ ಸೆಟ್ ಅನ್ನು ಧ್ವಂಸಗೊಳಿಸಿ, ಚಿತ್ರತಂಡವನ್ನು ಅಟ್ಟಾಡಿಸಿದ ಘಟನೆ ನಡೆದಿದೆ.

ಜಾಹೀರಾತು ಚಿತ್ರಕ್ಕಾಗಿ ಮುಂಬೈ ಮೂಲದ ಗುಡ್‌ಮಾರ್ನಿಂಗ್ ಫಿಲ್ಮ್ಸ್ ಹಾಕಿದ್ದ ಸೆಟ್ಟನ್ನು ಸ್ಥಳೀಯ ಸಂಘಟನೆಯೊಂದರ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದ ನಗರವೊಂದರ ದೃಶ್ಯಾವಳಿಯನ್ನು ಸೃಷ್ಟಿಸುವ ಸಲುವಾಗಿ ಪಾಕಿಸ್ತಾನದ ಸ್ಥಳಗಳ ಹೆಸರು, ಸಂಕೇತಗಳು ಮತ್ತು ಉರ್ದು ಬರಹ, ಕಟ್ಟಡ ಹಾಗೂ ಸ್ಥಳದ ದೃಶ್ಯಾವಳಿಗಳ ಸೆಟ್ ನಿರ್ಮಿಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಇಂಥ ಯಾವ ದಾಳಿಯೂ ನಡೆದಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದರೂ, ದಾಳಿ ನಡೆಸಿದ ಸಂಘಟನೆ ಮುಖ್ಯಸ್ಥ, ಚಿತ್ರತಂಡದ ಸೆಟ್ ಹಾಗೂ ಬ್ಯಾನರ್‌ಗಳನ್ನು ನಾಶಪಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಕೂಡಾ ಕೆಲ ಅಹಿತಕರ ಘಟನೆ ನಡೆದಿದೆ ಎಂದು ಬಹಿರಂಗಪಡಿಸಿದ್ದಾರೆ. ಮೂರು ತಿಂಗಳ ಹಿಂದೆ ಇದೇ ನಗರದಲ್ಲಿ ರಜಪೂತ ಕಾರ್ಣಿ ಸೇನಾ ಎಂಬ ಸಂಘಟನೆ ಪದ್ಮಾವತಿ ಚಿತ್ರತಂಡದ ಮೇಲೆ ಹಲ್ಲೆ ಮಾಡಿ ನಿರ್ಮಾಪಕ ಸಂಜಯ್‌ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿತ್ತು.

ಮುಂಬೈ ಮೂಲದ ಗುಡ್‌ಮಾರ್ನಿಂಗ್ ಫಿಲ್ಮ್ಸ್ ಚಿತ್ರತಂಡ ಫೋಕ್ಸ್‌ವ್ಯಾಗನ್ ಪೋಲೊ ಹ್ಯಾಚ್‌ಬ್ಯಾಕ್ ಜಾಹೀರಾತಿಗಾಗಿ ಕಿರುಚಿತ್ರವನ್ನು ಚಾಂದನಿ ಚೌಕ್ ಪ್ರದೇಶದಲ್ಲಿ ಚಿತ್ರೀಕರಿಸಲು ಮುಂದಾಗಿತ್ತು. ಸೂಕ್ತ ಅನುಮತಿ ಪಡೆದ ಬಳಿಕ ವೆಲ್‌ಕಮ್ ಟೂ ಲಾಹೋರ್ ಎಂಬ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭದಲ್ಲಿ ಧರೋಹರ ಬಚಾವೋ ಸಮಿತಿಯ 40ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News