ನಕ್ಸಲ್ ದಾಳಿ ಪ್ರಕರಣ: ರಾಜ್‌ನಾಥ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

Update: 2017-04-26 13:02 GMT

 ಹೊಸದಿಲ್ಲಿ, ಎ.26: ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಕ್ಸಲ್ ಬಾಧಿತ ಪ್ರದೇಶದಲ್ಲಿ ನಕ್ಸಲ್ ನಿರೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳಿಗೆ ಆಗುವ ಅಪಾಯವನ್ನು ಕನಿಷ್ಟಗೊಳಿಸುವ ನಿಟ್ಟಿನಲ್ಲಿ ಮಾನವ ಗುಪ್ತಮಾಹಿತಿ ಜಾಲವನ್ನು ಬಲಪಡಿಸಲು ನಿರ್ಧರಿಸಲಾಗಿದೆ.

ಗುಪ್ತಮಾಹಿತಿ ಪಡೆಯುವ ವ್ಯವಸ್ಥೆಯನ್ನು ಪರಿಷ್ಕರಿಸುವ ಅಗತ್ಯದ ಬಗ್ಗೆ ಒತ್ತಿಹೇಳಲಾಯಿತು. ಸಮಸ್ಯೆಯಿರುವ ಸ್ಥಳವನ್ನು ಗುರುತಿಸಿ ಕಾರ್ಯಾಚರಣೆಯನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ ಹೆಚ್ಚಿನ ಯಶಸ್ಸು ಪಡೆಯಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ರಸ್ತೆ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವ ತಂಡದ ಮೇಲೆ ನಿರಂತರವಾಗಿ ನಡೆಯತ್ತಿರುವ ಆಕ್ರಮಣವನ್ನು ತಡೆಯಲು ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತ್ವರಿತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವಂತೆ ರಾಜನಾಥ್ ಸಿಂಗ್ ತಿಳಿಸಿದರು. ಅಲ್ಲದೆ ಸುಕ್ಮಾ ದಾಳಿ ಪ್ರಕರಣದಿಂದ ನಕ್ಸಲ್ ನಿರೋಧ ಕಾರ್ಯಾಚರಣೆಗೆ ತೊಡಕಾಗಬಾರದು. ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಬೇಕು ಎಂದು ಸೂಚಿಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಮತ್ತಿತರ ಉನ್ನತ ಭದ್ರತಾ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ನಕ್ಸಲ್ ನಿರೋಧ ಕಾರ್ಯನೀತಿಯನ್ನು ಹೆಚ್ಚು ಪರಿಣಾಮಕಾರಿ ಯಾಗುವಂತೆ ರೂಪಿಸಲು ನಿರ್ಧರಿಸಲಾಯಿತು.

ಛತ್ತೀಸ್‌ಗಢದ ಸುಕ್ಮಾದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದ ನಕ್ಸಲರು ಸ್ಥಳೀಯ ಬುಡಕಟ್ಟು ಜನರ ಮನೆಯಲ್ಲಿ ಆಶ್ರಯ ಪಡೆದಿದ್ದರು ಮತ್ತು ಈ ಬಗ್ಗೆ ಮಾಹಿತಿ ಕಲೆ ಹಾಕಲು ಗುಪ್ತಚರ ವಿಭಾಗ ವಿಫಲವಾದ ಹಿನ್ನೆಲೆಯಲ್ಲಿ ಗುಪ್ತಮಾಹಿತಿ ವ್ಯವಸ್ಥೆಯನ್ನು ಪರಿಷ್ಕರಿಸಲು ನಿರ್ಧರಿಸಲಾಯಿತು. ಒಂದು ವೇಳೆ ಈ ಬಗ್ಗೆ ಗುಪ್ತಚರ ಪಡೆ ಮಾಹಿತಿ ನೀಡಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯರೊಡನೆ ಹೆಚ್ಚಿನ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲು ತೀರ್ಮಾನಿಸಲಾಯಿತು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

  ದೇಶದ ಸುಮಾರು 68 ಜಿಲ್ಲೆಗಳಲ್ಲಿ ನಕ್ಸಲರ ಪ್ರಭಾವವಿದ್ದರೂ ಶೇ.90ರಷ್ಟು ನಕ್ಸಲ್ ಚಟುವಟಿಕೆಯನ್ನು 35 ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನಕ್ಸಲ್ ಬಾಧಿತ 10 ರಾಜ್ಯಗಳ ಸಭೆಯು ಮೇ 8ರಂದು ನಡೆಯಲಿದ್ದು ಇದರಲ್ಲಿ ಮುಖ್ಯಮಂತ್ರಿಗಳು ಹಾಗೂ ಭದ್ರತಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಕ್ಸಲ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಕಾರ್ಯತಂತ್ರದ ನೀಲನಕ್ಷೆಯನ್ನು ಈ ಸಭೆಯಲ್ಲಿ ಮಂಡಿಸಬೇಕಿದ್ದು ಇದನ್ನು ತಕ್ಷಣ ಸಿದ್ದಪಡಿಸುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News