ಯುಜಿಸಿ ಸ್ಕಾಲರ್‌ಶಿಪ್‌ಗೂ ಆಧಾರ್ ಕಡ್ಡಾಯ

Update: 2017-04-28 03:46 GMT

ಹೊಸದಿಲ್ಲಿ, ಎ.28: ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಕ್ರಮವನ್ನು ಒಂದೊಂದೇ ಇಲಾಖೆಗೆ ವಿಸ್ತರಿಸುತ್ತಿರುವ ಕೇಂದ್ರ ಸರಕಾರಿ ಇದೀಗ ಕೇಂದ್ರದಿಂದ ಪಡೆಯುವ ಎಲ್ಲ ವಿದ್ಯಾರ್ಥಿವೇತನ ಹಾಗೂ ಶಿಷ್ಯವೇತನಕ್ಕೆ ಆಧಾರ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಆದೇಶ ಹೊರಡಿಸಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಫೆಲೋಶಿಪ್‌ಗಳಿಗೂ ಇದು ಅನ್ವಯಿಸುತ್ತದೆ.
"ಆಧಾರ್ ಕಡ್ಡಾಯಗೊಳಿಸುವ ಕ್ರಮದಿಂದ ಸಬ್ಸಿಡಿ ಅಥವಾ ಸರಕಾರಿ ಸೌಲಭ್ಯಗಳನ್ನು ವಿತರಿಸುವ ಪ್ರಕ್ರಿಯೆ ಸರಳವಾಗುತ್ತದೆ. ಹೆಚ್ಚು ದಕ್ಷ ಹಾಗೂ ಪಾರದರ್ಶಕವಾಗುತ್ತದೆ ಮತ್ತು ಯಾರ ಮಧ್ಯಸ್ಥಿಕೆಯೂ ಇಲ್ಲದೇ ನೇರವಾಗಿ ಫಲಾನುಭವಿ ಪ್ರಯೋಜನ ಪಡೆಯಲು ಅನುಕೂಲವಾಗುತ್ತದೆ" ಎಂದು ಹೊರಡಿಸಿದ ಅಧಿಸೂಚನೆ ಹೇಳಿದೆ.

ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ಘೋಷಿಸಿಕೊಳ್ಳಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಆಧಾರ್ ಪಡೆದುಕೊಳ್ಳದ ವಿದ್ಯಾರ್ಥಿಗಳು ತಕ್ಷಣ ನೋಂದಾಯಿಸಿಕೊಂಡು, ಸಂಖ್ಯೆಯನ್ನು ಕಾಲೇಜುಗಳಿಗೆ ನೀಡಬಹುದಾಗಿದೆ. ಅಸ್ಸಾಂ, ಮೇಘಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಇದರಿಂದ ವಿನಾಯಿತಿ ನೀಡಲಾಗಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ, ಜನರಿಗೆ ಯುಐಡಿ ಸಂಖ್ಯೆ ಇಲ್ಲದಿದ್ದರೂ, ಅವರಿಗೆ ನೆರವನ್ನು ನಿರಾಕರಿಸುವಂತಿಲ್ಲ. ಆದರೆ ಪ್ರತಿಯೊಂದು ಯೋಜನೆಗಳಿಗೆ ಸರ್ಕಾರ ಆಧಾರ್ ಕಡ್ಡಾಯ ಮಾಡುತ್ತಿರುವುದು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಕಳೆದ ಜುಲೈನಲ್ಲೇ ಯುಜಿಸಿ, ಆಧಾರ್ ಸಂಖ್ಯೆ ನೀಡುವಂತೆ ಎಲ್ಲ ಫೆಲೋಶಿಪ್ ಹಾಗೂ ಸ್ಕಾಲರ್‌ಶಿಪ್ ಫಲಾನುಭವಿಗಳಿಗೆ ಸೂಚಿಸಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಿರ್ಧಾರದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News