ದನವನ್ನು ಓಡಿಸಲು ಹಾರ್ನ್ ಬಾರಿಸಿ ಕಣ್ಣು ಕಳೆದುಕೊಂಡ ವ್ಯಾನ್ ಚಾಲಕ

Update: 2017-04-29 08:54 GMT

ಸಹರ್ಸಾ(ಬಿಹಾರ),ಎ.29: ಗೋರಕ್ಷಕರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ ಸಹರ್ಸಾ ಜಿಲ್ಲೆಯಲ್ಲಿ ಮಧ್ಯರಸ್ತೆಯಲ್ಲಿದ್ದ ದನವನ್ನು ಕಂಡು ಹಾರ್ನ್ ಬಾರಿಸಿದ ತಪ್ಪಿಗೆ ವ್ಯಾನ್ ಚಾಲಕನೋರ್ವ ತೀವ್ರ ಹಲ್ಲೆಗೊಳಗಾಗಿದ್ದು, ಆತನ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿದೆ.

ಸಹರ್ಸಾ ಜಿಲ್ಲೆಯ ಸೋನ್‌ಬರ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಮೈನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

  ನೆರೆಯ ಭಾಗಲ್ಪುರ ಜಿಲ್ಲೆಯ ಬೋಚಾಹಿ ಗ್ರಾಮದ ನಿವಾಸಿ ಗಣೇಶ ಮಂಡಲ್ (30) ಗುರುವಾರ ಸಂಜೆ ತನ್ನ ಪಿಕಪ್ ವ್ಯಾನ್‌ನಲ್ಲಿ ಸಹರ್ಸಾದಿಂದ ಮನೆಗೆ ವಾಪಸಾಗುತ್ತಿದ್ದ. ಮೈನಾ ಗ್ರಾಮ ತಲುಪಿದಾಗ ದನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾನಿಗೆ ಅಡ್ಡವಾಗಿ ಬಂದಿತ್ತು. ಹೀಗಾಗಿ ಗಣೇಶ ಹಾರ್ನ್ ಬಾರಿಸಿದ್ದ. ಇದರಿಂದ ಬೆದರಿದ ದನ ದಿಕ್ಕಾಪಾಲಾಗಿ ಓಡಿತ್ತು. ಸಮೀಪದಲ್ಲಿಯೇ ಇದ್ದ ದನದ ಮಾಲಿಕ ರಾಮ ದುಲಾರ್ ಇದರಿಂದ ರೊಚ್ಚಿಗೆದ್ದು ದೊಣ್ಣೆಯಿಂದ ಗಣೇಶಗೆ ಹಿಗ್ಗಾಮುಗ್ಗಾ ಥಳಿಸಿದ್ದ.

ಎಡಗಣ್ಣಿಗೆ ತೀವ್ರ ಏಟುಬಿದ್ದಾಗ ವಿಪರೀತ ರಕ್ತಸ್ರಾವದೊಂದಿಗೆ ಗಣೇಶ ಕುಸಿದು ಬಿದ್ದಿದ್ದ. ಪ್ರಜ್ಞಾಶೂನ್ಯನಾಗಿದ್ದ ಆತನನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಪ್ರಜ್ಞೆ ಮರುಕಳಿಸಿದ ಬಳಿಕ ತನಗೆ ಎಡಗಣ್ಣು ತೋರುವುದಿಲ್ಲವೆಂದು ಆತ ದೂರಿಕೊಂಡಿದ್ದರಿಂದ ಸಹರ್ಸಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಭಾಗಲ್ಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಎಡಗಣ್ಣು ದೃಷ್ಟಿ ಕಳೆದುಕೊಂಡಿರಬಹುದೆಂದು ವೈದ್ಯರು ಶಂಕಿಸಿದ್ದಾರೆ.

ತನ್ಮಧ್ಯೆ ದನ ರಸ್ತೆಯಲ್ಲಿ ಓಡಾಡುತ್ತಿತ್ತು ಎನ್ನುವುದನ್ನು ನಿರಾಕರಿಸಿರುವ ಆರೋಪಿ ಯಾದವ, ವಾಸ್ತವದಲ್ಲಿ ತಾನು ದನದ ಹಾಲು ಕರೆಯುತ್ತಿದ್ದೆ ಮತ್ತು ಗಣೇಶ ಹಾರ್ನ್ ಬಾರಿಸಿ ಅದನ್ನು ಬೆದರಿಸಿದ್ದ ಎಂದು ಹೇಳಿದ್ದಾನೆ.

ಸೋನ್‌ಬರ್ಸಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News