ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮುಖ್ಯ ಆರೋಪಿ ಸಾವು,ಸಹ ಆರೋಪಿಗೆ ಗಂಭೀರ ಗಾಯ

Update: 2017-04-29 09:37 GMT

ಕೊಯಮತ್ತೂರು,ಎ.29: ನೀಲಗಿರಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಕೊಡ್ನಾಡ್ ಚಹಾತೋಟದ ಕಾವಲುಗಾರನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಶಂಕಿಸಲಾಗಿದ್ದ ಸಿ.ಕನಕರಾಜ್(36) ಶುಕ್ರವಾರ ರಾತ್ರಿ ಸೇಲಂ ಜಿಲ್ಲೆಯ ಅಟ್ಟೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇಷ್ಟೇ ಆಗಿದ್ದರೆ ಮಾಮೂಲು ಅಪಘಾತವೆನ್ನಬಹುದಿತ್ತೇನೋ...? ಆದರೆ ಶನಿವಾರ ನಸುಕಿನಲ್ಲಿ ನೆರೆಯ ಕೇರಳದಲ್ಲಿ ಸಂಭವಿಸಿದ ಇನ್ನೊಂದು ಅಪಘಾತ ಪ್ರಕರಣದಲ್ಲಿ ಸಹ ಆರೋಪಿ, ಕನಕರಾಜ್‌ನ ನಿಕಟವರ್ತಿ ಕೆ. ಸಾಯನ್ ಯಾನೆ ಶ್ಯಾಮ್ (35) ಗಂಭೀರ ವಾಗಿ ಗಾಯಗೊಂಡಿದ್ದು, ಆತನ ಪತ್ನಿ ವಿನುಪ್ರಿಯಾ (30)ಮತ್ತು ಪುತ್ರಿ ನೀತು (5) ಸಾವನ್ನಪ್ಪಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಈ ಅಪಘಾತಗಳು ಸಂಭವಿಸಿರುವುದು ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿದೆ. ಎರಡನೇ ಅಪಘಾತ ಆತ್ಮಹತ್ಯೆ ಪ್ರಕರಣವಾಗಿರಬೇಕೆಂದು ಪೊಲಿಸರು ಶಂಕಿಸಿದ್ದಾರೆ.

ಸೇಲಂ ಜಿಲ್ಲೆಯ ಎಡಪ್ಪಾಡಿ ನಿವಾಸಿ ಕನಕರಾಜ್ 2012ರವರೆಗೂ ಜಯಲಲಿತಾರ ಕಾರು ಚಾಲಕನಾಗಿದ್ದ. ಶುಕ್ರವಾರ ರಾತ್ರಿ ಅಟ್ಟೂರಿನಲ್ಲಿ ಆತ ಚಲಾಯಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಪ್ರಕರಣವನ್ನು ದಾಖಲಿಸಿಕೊಂಡಿರುವ ಅಟ್ಟೂರು ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.

 ತ್ರಿಶೂರು ನಿವಾಸಿ ಸಾಯನ್ ಕೊಯಮತ್ತೂರಿನ ಕುಣಿಯಮುತ್ತೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕನಕರಾಜ್‌ನ ಆಪ್ತಮಿತ್ರನಾಗಿದ್ದ ಆತ ಇಲ್ಲಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಶನಿವಾರ ಬೆಳಗಿನ ಜಾವ ಆತ ತನ್ನ ಕುಟಂಬದೊಂದಿಗೆ ಕೊಯಮತ್ತೂರಿನಿಂದ ತ್ರಿಶೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಐದು ಗಂಟೆಯ ಸುಮಾರಿಗೆ ಪಾಲಕ್ಕಾಡ್ ಸಮೀಪದ ಕಣ್ಣಾಡಿ ಎಂಬಲ್ಲಿಗೆ ತಲುಪಿದಾಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರು ಢಿಕ್ಕಿ ಹೊಡೆದಿದೆ. ಕೊಡ್ನಾಡ್ ಎಸ್ಟೇಟ್‌ನಲ್ಲಿ ದರೋಡೆ ಯತ್ನಕ್ಕೆ ಇದೇ ಕಾರನ್ನು ಬಳಸಲಾಗಿತ್ತು.

 ದರೋಡೆ ಉದ್ದೇಶದಿಂದ ಎ.24ರಂದು ರಾತ್ರಿ ಎರಡು ವಾಹನಗಳಲ್ಲಿ ಕೊಡ್ನಾಡ್ ಚಹಾತೋಟವನ್ನು ಪ್ರವೇಶಿಸಿದ್ದ ದುಷ್ಕರ್ಮಿಗಳ ಗುಂಪು ಅಲ್ಲಿ ಕಾವಲುಗಾರನಾಗಿದ್ದ ನೇಪಾಳ ಮೂಲದ ಓಂ ಬಹಾದೂರ್(51)ನನ್ನು ಹತ್ಯೆಗೈದು, ಇನ್ನೋರ್ವ ಕಾವಲುಗಾರ ಕೃಷ್ಣ ಬಹಾದೂರ್(37)ನನ್ನು ಗಂಭೀರವಾಗಿ ಗಾಯಗೊಳಿಸಿ, ಬಳಿಕ ಬಲಪ್ರಯೋಗದಿಂದ ಕೆಲವು ಕಿಟಕಿಗಳನ್ನು ತೆರೆದು ಒಳನುಗ್ಗುವ ಮೊದಲೇ ಪರಾರಿಯಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕನಕರಾಜ್ ಮತ್ತು ಸಾಯನ್ ಕೂಡ ಆರೋಪಿಗಳೆಂದು ಹೇಳಲಾಗಿದ್ದು, ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News