ಈ 106 ವರ್ಷದ ಅಜ್ಜಿಗೆ ಯುಟೂಬ್ ನಲ್ಲಿ 2,48,000 ಅಭಿಮಾನಿಗಳು !
ಹೊಸದಿಲ್ಲಿ, ಜ. 29: ಯುಟ್ಯೂಬ್ ನಲ್ಲಿ ಅಡುಗೆ ಮಾಡುವ ವಿಧಾನ ಹೇಳಿಕೊಡುವ 106 ವರ್ಷದ ಅಜ್ಜಿಯೊಬ್ಬರು ಇಂಟರ್ನೆಟ್ ಸೆನ್ಸೇಶನ್ ಆಗಿ ಬಿಟ್ಟಿದ್ದಾರೆ. ಅಂದ ಹಾಗೆ ಈ ಅಜ್ಜಿ, 106 ವರ್ಷದ ಮಸ್ತನಮ್ಮ ಆಂಧ್ರ ಪ್ರದೇಶದವರಾಗಿದ್ದಾರೆ. ಯುಟ್ಯೂಬ್ ನಲ್ಲಿ ಸಕ್ರಿಯವಾಗಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆಯಾಗಿರುವ ಈಕೆ ತನ್ನ ಸ್ವಂತ ಚಾನಲ್ ‘ಕಂಟ್ರಿ ಫುಡ್ಸ್’ ಕೂಡ ಹೊಂದಿದ್ದಾರೆ.
ಮಸ್ತನಮ್ಮಳ ಯುಟ್ಯೂಬ್ ಚಾನಲ್ ಗೆ 2,48,000 ಚಂದಾದಾರರಿದ್ದು. ಸಾಂಪ್ರದಾಯಿಕ ಅಡುಗೆ ಸಿದ್ಧಪಡಿಸುವ ತನ್ನ ನೈಪುಣ್ಯತೆಯಿಂದ ಈ ಅಜ್ಜಿ ಎಲ್ಲರ ಮನಗೆದ್ದಿದ್ದಾರೆ. ಸ್ವಾದಿಷ್ಟ ಎಗ್ ದೋಸೆಯಿಂದ ಹಿಡಿದ ಫಿಶ್ ಫ್ರೈ, ಬಾಂಬೂ ಚಿಕನ್ ಬಿರಿಯಾನಿ ಮಾಡುವ ಬಗೆಯನ್ನು ಆಕೆಯ ವೀಡಿಯೋಗಳು ಕಲಿಸುತ್ತವೆ. ಆಕೆಯ ಯುಟ್ಯೂಬ್ ಚಾನಲ್ ಅನ್ನು ಆಕೆಯ ಮರಿ ಮೊಮ್ಮಗ ಕೆ ಲಕ್ಷ್ಮಣ್ ಅವರು ನಡೆಸುತ್ತಿದ್ದಾರೆ.
‘‘ಒಂದು ರಾತ್ರಿ ಬಹಳಷ್ಟು ಹಸಿದಿದ್ದ ನಾನು ಮತ್ತು ನನ್ನ ಗೆಳೆಯರು ಸ್ವಲ್ಪ ಆಹಾರ ತಯಾರಿಸಿ ತಿಂದೆವು. ಆಗ ನಾವೇ ಏಕೆ ಒಂದು ಯುಟ್ಯೂಬ್ ಚಾನಲ್ ಆರಂಭಿಸಬಾರದು ಎಂಬ ಯೋಚನೆ ಬಂತು. ನಮ್ಮ ಮೊದಲ ವೀಡಿಯೋ ವೈರಲ್ ಆಯಿತು. ಆಗ ಈ ಚಾನಲ್ ನಡೆಸಲು ತೀರ್ಮಾನಿಸಿ ನನ್ನ ಅಜ್ಜಿಯ ಸಹಾಯದಿಂದ ತಾಜಾ ವಸ್ತುಗಳನ್ನು ಉಪಯೋಗಿಸಿ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸುವ ವೀಡಿಯೋ ಸಿದ್ಧಪಡಿಸಲು ನಿರ್ಧರಿಸಿದೆವು. ಆಕೆಗೂ ಸಂತಸವಾಗಿದೆ,’’ ಎನ್ನುತ್ತಾರೆ ಲಕ್ಷ್ಮಣ್.
ಸೀಫುಡ್ ಹಾಗೂ ದೋಸೆ ತಯಾರಿಸುವುದರಲ್ಲಿ ಅಜ್ಜಿ ಸಿದ್ಧಹಸ್ತರಾಗಿದ್ದಾರೆಂದು ಲಕ್ಷ್ಮಣ್ ಹೇಳುತ್ತಾರೆ.