ನಾಗರಿಕ ಸಮಾಜದಲ್ಲಿ ಪುರುಷ ಪ್ರಾಧಾನ್ಯತೆಗೆ ಅವಕಾಶ ಇಲ್ಲ: ಸುಪ್ರೀಂ
ಹೊಸದಿಲ್ಲಿ, ಎ.29: ನಾಗರಿಕ ಸಮಾಜದಲ್ಲಿ ಪುರುಷ ಪ್ರಾಧಾನ್ಯತೆಯ ಮನೋಭಾವನೆಗೆ ಅವಕಾಶವಿಲ್ಲ ಮತ್ತು ಚುಡಾವಣೆಯಂತಹ ಆಕ್ಷೇಪಾರ್ಹ ಕೃತ್ಯಗಳು ಮಹಿಳೆಯರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಹುಡುಗಿಯನ್ನು ಚುಡಾಯಿಸಿದ ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ ಆರೋಪದಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನಿಂದ 7 ವರ್ಷ ಜೈಲುಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯೋರ್ವ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಹಂಭಾವ ನ್ಯಾಯಾಲಯದ ಮುಂದೆ ಶರಣಾಗಲೇ ಬೇಕು ಎಂದು ತಿಳಿಸಿರುವ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ, ಈ ದೇಶದಲ್ಲಿ ಮಹಿಳೆಯರು ಶಾಂತಿಯಿಂದ ಮತ್ತು ಘನತೆಯಿಂದ ಬಾಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿತು.
ಸಂವಿಧಾನವು ಮಹಿಳೆಗೆ ಸ್ವೀಕಾರಾರ್ಹ ಹಕ್ಕುಗಳನ್ನು ನೀಡಿದೆ. ಇದಕ್ಕೆ ಯಾರ ಕೃಪೆಯೂ ಅಗತ್ಯವಿಲ್ಲ. ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಅವಕಾಶವಿದೆ. ಸಂವಿಧಾನದ 14ನೇ ಪರಿಚ್ಛೇದದಡಿ ಪುರುಷರಷ್ಟೇ ಸಮಾನತೆಯನ್ನು ಮಹಿಳೆಯರಿಗೆ ನೀಡಲಾಗಿದೆ.
ಪುರುಷರು ತಾವು ಮೇಲೆಂಬ ಅಹಂಭಾವ ತ್ಯಜಿಸಬೇಕು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಮಹಿಳೆಗೆ ಬದುಕುವ ಹಕ್ಕಿದೆ ಮತ್ತು ಯಾರನ್ನು ಪ್ರೀತಿಸಬೇಕು ಎಂಬುದು ಆಕೆಯ ಆಯ್ಕೆಯಾಗಿರಬೇಕು. ತನ್ನನ್ನೇ ಪ್ರೀತಿಸಬೇಕು ಎಂದು ಆಕೆಯನ್ನು ಒತ್ತಾಯಿಸುವಂತಿಲ್ಲ. ಆಕೆಯ ವೈಯಕ್ತಿಕ ಆಯ್ಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದೂ ಪೀಠ ತಿಳಿಸಿದೆ.
ಮಹಿಳೆಯರು ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನದ 21ನೇ ಪರಿಚ್ಛೇದದಡಿ ಖಾತರಿಪಡಿಸಲಾಗಿದೆ. ಇದನ್ನು ಮಹಿಳೆಯರ ಚುಡಾವಣೆಯಂತಹ ಆಕ್ಷೇಪಾರ್ಹ ಕೃತ್ಯದ ಮೂಲಕ ಉಲ್ಲಂಘಿಸುವಂತಿಲ್ಲ. ಹೀಗೆ ಮಾಡಿದರೆ ಲಿಂಗ ಸಮಾನತೆಯ ಪರಿಕಲ್ಪನೆ ಮತ್ತು ಮಹಿಳೆಯರ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂದು ನ್ಯಾಯಾಲಯದ ಪೀಠವು ಅಭಿಪ್ರಾಯ ಪಟ್ಟಿದೆ.