×
Ad

ಶ್....ಇಲ್ಲಿ ಸದ್ದು ಮಾಡುವಂತಿಲ್ಲ!

Update: 2017-04-30 09:10 IST

ಗುವಾಹತಿ, ಎ.30: ಕರ್ಮೂಪ್ (ಮೆಟ್ರೊ) ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣಗಳ ಸುತ್ತಲಿನ 100 ಮೀಟರ್ ಪ್ರದೇಶವನ್ನು ನಿಶ್ಶಬ್ದ ವಲಯ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದೇವಾಲಯ, ಮಸೀದಿ, ಗುರುದ್ವಾರ ಹಾಗೂ ಚರ್ಚ್‌ಗಳಿಗೆ ಇದು ಅನ್ವಯಿಸುತ್ತದೆ.

ಶುಕ್ರವಾರ ಸಂಜೆ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪ್ರದೇಶಗಳ ಶಬ್ದಮಾಲಿನ್ಯ ಬಗ್ಗೆ ಮಾಸಿಕ ವರದಿ ಸಲ್ಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜಿಲ್ಲಾಧಿಕಾರಿ ಎಂ.ಅಂಗಮುತ್ತು ಸೂಚಿಸಿದ್ದಾರೆ.

ಅಸ್ಸಾಂ ಸರಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿರ್ಬಂಧ) ನಿಯಮಾವಳಿ-2000ದ ನಿಯಮ 3(2) ಅನ್ವಯ ಈ ಆದೇಶ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ ಧಾರ್ಮಿಕ ಸ್ಥಳಗಳಲ್ಲಿ ಮೈಕ್ರೋಫೋನ್ ಅಥವಾ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ಯಾವುದೇ ನೇರ ಉಲ್ಲೇಖ ಮಾಡಿಲ್ಲ.

ಈ ಬಗ್ಗೆ ಸ್ಪಷ್ಟನೆ ಕೇಳಿದಾಗಲೂ ಉತ್ತರಿಸಲು ಜಿಲ್ಲಾಧಿಕಾರಿ ನಿರಾಕರಿಸಿದರು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ ಎಂದಷ್ಠೇ ಹೇಳಿದರು. ಮೇಲ್ಕಂಡ ನಿಯಮಾವಳಿಯ ಅನ್ವಯ, ಪರಿಸರದ ಗಾಳಿಯ ಗುಣಮಟ್ಟ ಹಾಗೂ ಶಬ್ದ ಮಾಲಿನ್ಯದ ಮಟ್ಟವನ್ನು ವಿವಿಧ ವಲಯಗಳಿಗೆ ನಿಗದಿಪಡಿಸಲಾಗಿದೆ.

ನಿಯಮಾವಳಿಯಲ್ಲಿ ಕೈಗಾರಿಕೆ, ವಾಣಿಜ್ಯ, ವಸತಿ ಹಾಗೂ ನಿಶ್ಶಬ್ದ ವಲಯಗಳೆಂದು ಪ್ರದೇಶಗಳನ್ನು ವರ್ಗೀಕರಿಸಲಾಗಿದೆ. ಪ್ರತಿ ಪ್ರದೇಶಕ್ಕೆ ಶಬ್ದ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಹೊಸ ಅಧಿಸೂಚನೆ ಅನ್ವಯ ಗುವಾಹತಿಯಲ್ಲಿ ಐದು ಪ್ರದೇಶಗಳನ್ನು ನಿಶ್ಶಬ್ದ ವಲಯ ಎಂದು ಘೋಷಿಸಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಹೈಕೋರ್ಟ್, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಎಲ್ಲ ಸರ್ಕಾರಿ ಕಚೇರಿಗಳು ಇದರಲ್ಲಿ ಸೇರುತ್ತವೆ.

ಇದರ ಜತೆಗೆ ದೇವಸ್ಥಾನ, ಗುರುದ್ವಾರ, ಮಸೀದಿ, ಚರ್ಚ್, ಬೌದ್ಧವಿಹಾರತಾಣ, ಮಠ ಮತ್ತು ನಾಮ್‌ಘರ್ ಸೇರಿದಂತೆ ಎಲ್ಲ ಪ್ರಮುಖ ಧಾರ್ಮಿಕ ತಾಣಗಳು ಸೇರುತ್ತವೆ. ಅಧಿಸೂಚಿತ ಪ್ರದೇಶಗಳಲ್ಲಿ 15 ದಿನಗಳ ಒಳಗಾಗಿ ಸೂಕ್ತ ಸಂಕೇತಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News