‘‘ಹೌದು,ಆಧಾರ್ ದತ್ತಾಂಶಗಳ ಸೋರಿಕೆಯಾಗಿದೆ’’: ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡ ಕೇಂದ್ರ

Update: 2017-05-03 14:58 GMT

ಹೊಸದಿಲ್ಲಿ,ಮೇ 3: ಆಧಾರ್ ಕಾರ್ಡ್ ಹೊಂದಿರುವವರ ದತ್ತಾಂಶಗಳು ಸೋರಿಕೆ ಯಾಗಿರುವುದು ನಿಜ ಎಂದು ಕೇಂದ್ರ ಸರಕಾರವು ಬುಧವಾರ ಸರ್ವೋಚ್ಚ ನ್ಯಾಯಾಲಯ ದಲ್ಲಿ ಒಪ್ಪಿಕೊಂಡಿತು. ಆದರೆ ಈ ಮಾಹಿತಿಗಳು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದಿಂದ ಸೋರಿಕೆಯಾಗಿಲ್ಲ ಎಂದು ಅದು ಪ್ರತಿಪಾದಿಸಿತು.

ವಿವಿಧ ಇತರ ಸರಕಾರಿ ಇಲಾಖೆಗಳು ಮತ್ತು ರಾಜ್ಯ ಏಜೆನ್ಸಿಗಳಿಂದ ದತ್ತಾಂಶಗಳು ಸೋರಿಕೆಯಾಗಿವೆ ಎಂದು ಸರಕಾರದ ಪರ ನ್ಯಾಯವಾದಿ ಅರ್ಘ್ಯ ಸೇನಗುಪ್ತಾ ಅವರು ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಪೀಠಕ್ಕೆ ತಿಳಿಸಿದರು.

ಆಧಾರ್ ದತ್ತಾಂಶ ಸೋರಿಕೆ ಬಗ್ಗೆ ಬುಧವಾರದ ವೃತ್ತಪತ್ರಿಕೆಗಳಲ್ಲಿಯೂ ವರದಿಗಳಿವೆ ಎಂದು ನ್ಯಾ.ಸಿಕ್ರಿ ಬೆಟ್ಟು ಮಾಡಿದಾಗ, ಅಲ್ಲಿ ಇಲ್ಲಿ ಕೆಲವು ತಪ್ಪುಗಳಿರಬಹುದು. ಕೆಲವು ಆಧಾರ್ ಕಾರ್ಡ್‌ಗಳನ್ನು ‘ಹನುಮಾನ್’ ಹೆಸರಿನಲ್ಲಿ ನೀಡಿರಬಹುದು. ನಾಯಿಗಳ ಹೆಸರಿನಲ್ಲಿಯೂ ಆಧಾರ ನೀಡಿರಬಹುದು. ಆದರೆ ಆಧಾರ್ ಅತ್ಯಂತ ಪ್ರಗತಿಶೀಲ ಮತ್ತು ವಿಶ್ವಾಸಾರ್ಹ ಬಯೊಮೆಟ್ರಿಕ್ ವ್ಯವಸ್ಥೆಯಾಗಿದೆ ಎಂದು ಸೇನಗುಪ್ತಾ ಪ್ರತಿಕ್ರಿಯಿಸಿದರು.

ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್‌ನ್ನು ಕಡ್ಡಾಯಗೊಳಿಸಿರುವ ಸರಕಾರದ ನೂತನ ಕಾನೂನನ್ನು ಸಮರ್ಥಿಸಿಕೊಳ್ಳುತ್ತಿದ್ದ ಸೇನಗುಪ್ತಾ, ಹಣಕಾಸು ಕಾಯ್ದೆ,2017ರಡಿ ಆದಾಯ ತೆರಿಗೆ ಕಾಯ್ದೆಯಲ್ಲಿ ಸೇರಿಸಲಾಗಿರುವ ಕಲಂ 139 ಎಎ ಅನ್ನು ಜಾರಿಗೊಳಿಸಲು ಶಾಸಕಾಂಗವು ಅಧಿಕಾರ ಹೊಂದಿದೆ ಎಂದರು.

ಯಾವುದೇ ಶಾಸನವೂ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದಿಲ್ಲ ಎಂದು ಹೇಳಿದ ಅವರು, ವ್ಯಕ್ತಿಗಳು ಮೊದಲ ಗುರಿಯಾಗಿರುವುದರಿಂದ ಅವರು ಆಧಾರ್ ಹೊಂದಿರುವುದು ಅಗತ್ಯವಾಗಿದೆಯೇ ಹೊರತು ಕಂಪನಿಗಳಲ್ಲ. ನಾಳೆ ಅಗತ್ಯವಾದರೆ ನಾವು ಪಾನ್ ಕಾರ್ಡ್ ಬದಲಿಗೆ ಆಧಾರ್‌ನ್ನು ತರಬಹುದು ಎಂದರು.

ಸೇನಗುಪ್ತಾರ ವಾದವನ್ನು ತಿರಸ್ಕರಿಸಿದ ಅರ್ಜಿದಾರರ ಪರ ವಕೀಲ ಶ್ಯಾಮ ದಿವಾನ್ ಅವರು, ಕೇಂದ್ರವು ಯುಐಡಿಎಐ ದತ್ತಾಂಶಗಳನ್ನು ಸೋರಿಕೆ ಮಾಡುತ್ತಿಲ್ಲ ಎಂದು ಹೇಳಿದರಷ್ಟೇ ಸಾಲದು. ಪ್ರಜೆಗಳ ದೃಷ್ಟಿಯಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಸರಕಾರವೇ ಆಗಿರುತ್ತಾರೆ ಎಂದು ಹೇಳಿದರು.

ವಿಶಿಷ್ಟ ಗುರುತಿನ ಚೀಟಿಯನ್ನು ಹೊಂದುವುದು ಸಂಪೂರ್ಣವಾಗಿ ಐಚ್ಛಿಕವಾಗಿದೆ ಎಂದು ಆಧಾರ್ ಕಾಯ್ದೆಯೇ ಹೇಳುತ್ತಿರುವಾಗ ಹಣಕಾಸು ಕಾಯ್ದೆಯು ಆಧಾರ್‌ನ್ನು ಹೇಗೆ ಕಡ್ಡಾಯಗೊಳಿಸುತ್ತದೆ ಎಂದು ದಿವಾನ್ ಪ್ರಶ್ನಿಸಿದರು.

 ನಿವೃತ್ತ ಮೇಜಎಸ್.ಜಿ.ವಂಬಟ್‌ಕೆರೆ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಅವರು ಆಧಾರ್‌ನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ವಾದವಿವಾದಗಳು ಅಪೂರ್ಣವಾಗಿದ್ದು, ಗುರುವಾರ ಮುಂದುವರಿಯಲಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News