ಮಹಾರಾಷ್ಟ್ರ: ಶಾಲಾ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟಕ್ಕೆ ನಿಷೇಧ
Update: 2017-05-09 23:33 IST
ಮುಂಬೈ, ಮೇ 9: ಶಾಲಾ ಕ್ಯಾಂಟೀನ್‌ಗಳಲ್ಲಿ ಜಂಕ್ ಪುಡ್ ಮಾರಾಟವನ್ನು ನಿಷೇಧಿಸಿ ರಾಜ್ಯ ಸರಕಾರವು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಈ ಕ್ಯಾಂಟೀನ್‌ಗಳಲ್ಲಿ ಪಿಝ್ಝಾ, ನೂಡಲ್ಸ್ ಮತ್ತು ಪೇಸ್ಟ್ರಿಗಳ ಬದಲಾಗಿ ವೆಜಿಟೇಬಲ್ ಕಿಚಡಿ, ರಾಜ್ಮಾ ರೈಸ್ ಮತ್ತು ಇಡ್ಲಿ-ವಡಾದಂತಹ ತಾಜಾ ತಿಂಡಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ.
ರಾಜ್ಯಾದ್ಯಂತ ಶಾಲಾ ಕ್ಯಾಂಟೀನ್‌ಗಳಲ್ಲಿ ಅಧಿಕ ಕೊಬ್ಬು,ಉಪ್ಪು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರಗಳ ಮಾರಾಟವನ್ನು ನಿಷೇಧಿಸಿ ಸರಕಾರವು ಸೋಮವಾರ ಆದೇಶಿಸಿದೆ.
ನಿಷೇಧಿತ ಆಹಾರ ವಸ್ತುಗಳಲ್ಲಿ ಬಟಾಟೆ ಚಿಪ್ಸ್, ಬರ್ಗರ್, ಕೇಕ್, ಬಿಸ್ಕಿಟ್, ಬನ್ ಇತ್ಯಾದಿಗಳು ಸೇರಿವೆ. ಕೋಕ್ ಮತ್ತು ಪೆಪ್ಸಿಯಂತಹ ತಂಪು ಪಾನೀಯಗಳನ್ನೂ ಮಾರುವಂತಿಲ್ಲ.
ಸರಕಾರವು ಮಾರಾಟ ಮಾಡ ಬಹುದಾದ ಆಹಾರ ವಸ್ತುಗಳ ಪಟ್ಟಿಯೊಂದನ್ನು ಈ ಕ್ಯಾಂಟೀನ್‌ಗಳಿಗೆ ಒದಗಿಸಿದ್ದು, ಗೋಧಿಯ ರೊಟ್ಟಿ, ವೆಜಿಟೇಬಲ್ ಪಲಾವ್, ಎಳನೀರು, ಜಲ್‌ಜೀರಾ ಇತ್ಯಾದಿಗಳು ಇದರಲ್ಲಿ ಸೇರಿವೆ.