ಯೋಧ ಉಮರ್ ಫಯಾಜ್ ಎಲ್ಲರಿಗೂ ಮಾದರಿ:ಅರುಣ್ ಜೇಟ್ಲಿ

Update: 2017-05-10 11:59 GMT

ಹೊಸದಿಲ್ಲಿ,ಮೇ 10: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರಿಂದ ಅಪಹೃತನಾಗಿ ಅವರ ಗುಂಡುಗಳಿಗೆ ಬಲಿಯಾದ ಕಾಶ್ಮೀರಿ ಸೇನಾಧಿಕಾರಿ ಲೆಉಮರ್ ಫಯಾಜ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಮತ್ತು ಕಾಶ್ಮೀರ ಕಣಿವೆಯ ಯುವಜನರಿಗೆ ಸ್ಫೂರ್ತಿಯಾಗಿ ಮುಂದುವರಿಯುತ್ತಾರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಯೋತ್ಪಾದಕರಿಂದ ಲೆಉಮರ್ ಫಯಾಜ್ ಅವರ ಅಪಹರಣ ಮತ್ತು ಹತ್ಯೆ ಹೇಡಿತನದ ಕೃತ್ಯವಾಗಿದೆ. ಜಮ್ಮು-ಕಾಶ್ಮೀರದ ಈ ಯುವ ಸೇನಾಧಿಕಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಜೇಟ್ಲಿ ಟ್ವೀಟಿಸಿದ್ದಾರೆ. ಗುಂಡುಗಳಿಂದ ಛಿದ್ರಗೊಂಡಿದ್ದ ಫಯಾಜ್ ಶವ ಇಂದು ಬೆಳಿಗ್ಗೆ ಶೋಪಿಯಾನ್‌ನಲ್ಲಿ ಪತ್ತೆಯಾಗಿತ್ತು.

ಫಯಾಜ್ ಅವರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಮತ್ತು ನಾವು ಅವರೊಂದಿಗಿದ್ದೇವೆ. ಫಯಾಜ್ ಅವರು ಕಣಿವೆಯ ಯುವಜನರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿದ್ದಾರೆ ಎಂದೂ ಜೇಟ್ಲಿ ಟ್ವೀಟಿಸಿದ್ದಾರೆ.

ಸೇನೆಯು ಕರುಳಿನ ಕುಡಿಯನ್ನು ಕಳೆದುಕೊಂಡಿರುವ ದುಃಖತಪ್ತ ಕುಟುಂಬಕ್ಕೆ ಬೆಂಬಲವಾಗಿ ನಿಂತಿದೆ ಎಂದು ರಾಜಪುತಾನಾ ರೈಫಲ್ಸ್‌ನ ಲೆಜ ಅಭಯ ಕೃಷ್ಣ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಐದು ತಿಂಗಳ ಹಿಂದಷ್ಟೇ ಸೇನೆಯ ಕರ್ತವ್ಯಕ್ಕೆ ಸೇರಿದ್ದ 22ರ ಹರೆಯದ ಫಯಾಜ್ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಮನೆಗೆ ಮರಳಿದ್ದರು. ಈ ಸಂದರ್ಭ ಸಾಧಿಸಿದ ಭಯೋತ್ಪಾದಕರು ಮಂಗಳವಾರ ರಾತ್ರಿ ಅವರನ್ನು ಅಪಹರಿಸಿದ್ದರು.

ಇದು ಕಾಶ್ಮೀರ ಕಣಿವೆಯಲ್ಲಿ ಮಹತ್ವದ ತಿರುವು ನೀಡಿರುವ ಘಳಿಗೆಯಾಗಿದೆ ಮತ್ತು ಕಾಶ್ಮೀರದ ಜನರ ಆಕ್ರೋಶ ಖಂಡಿತವಾಗಿಯೂ ಭೀತಿವಾದದ ವಿರುದ್ಧ ಅಲೆಗಳ ನ್ನೆಬ್ಬಿಸಲಿದೆ ಎಂದು ಸೇನೆಯ ಹೇಳಿಕೆಯು ತಿಳಿಸಿದೆ.

 ಫಯಾಜ್‌ರಿಗೆ ಅಂತಿಮ ನಮನಗಳನ್ನು ಸಲ್ಲಿಸಲು ಅವರ ನಿವಾಸದಲ್ಲಿ ಏರ್ಪಡಿಸಿದ್ದ ಅಧಿಕೃತ ಕಾರ್ಯಕ್ರಮಕ್ಕೆ ಆತಂಕಭರಿತ, ಶೋಕತಪ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಫಯಾಜ್‌ರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛಗಳನ್ನು ಅರ್ಪಿಸುವ ಸಂದರ್ಭದಲ್ಲಿ ಮನೆಯ ಬಳಿ ಕಲ್ಲುತೂರಾಟದಂತಹ ಕೆಲವು ಸಣ್ಣಪುಟ್ಟ ಘಟನೆಗಳು ನಡೆದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಫಯಾಜ್ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಅವರು, ಈ ಬರ್ಬರ ಹತ್ಯೆಯು ಭೀತಿವಾದದ ಹೇಡಿತನದ ಸ್ವರೂಪವನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News