ಭಾರತದಲ್ಲಿ ಔಷಧ ನಿರೋಧಕ ಟಿಬಿ ಪ್ರಕರಣ ಹೆಚ್ಚಳದ ಸಾಧ್ಯತೆ
ಹೊಸದಿಲ್ಲಿ, ಮೇ 10: ಔಷಧ ನಿರೋಧ ಶಕ್ತಿ ಇರುವ ಟಿಬಿ(ಕ್ಷಯ )ರೋಗ ಪ್ರಕರಣ ಭಾರತದಲ್ಲಿ ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿದ್ದು 2040ರ ವೇಳೆಗೆ ದೇಶದಲ್ಲಿ 10 ಟಿಬಿ ಪ್ರಕರಣದಲ್ಲಿ ಒಂದು ಔಷಧ ನಿರೋಧ ಟಿಬಿ ಪ್ರಕರಣವಾಗಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಫಿಲಿಫೈನ್ಸ್, ರಶ್ಯ ಮತ್ತು ದಕ್ಷಿಣ ಆಫ್ರಿಕಾದ ದೇಶಗಳಲ್ಲೂ ಇದೇ ಸ್ಥಿತಿ ಇರಲಿದೆ ಎಂದು ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. 2040ರ ವೇಳೆಗೆ ರಶ್ಯದ 3ರಲ್ಲಿ ಒಂದು ಟಿಬಿ ಪ್ರಕರಣ, ಫಿಲಿಫೈನ್ಸ್ ಮತ್ತು ಭಾರತದಲ್ಲಿ 10ರಲ್ಲಿ ಒಂದು ಹಾಗೂ ದಕ್ಷಿಣ ಆಫ್ರಿಕಾದಲ್ಲಿ 20ರಲ್ಲಿ ಒಂದು ಟಿಬಿ ಪ್ರಕರಣಗಳಿ ಔಷಧ ನಿರೋಧಕ ಪ್ರಕರಣಗಳಾಗಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗಕ್ಕೆ ಆ್ಯಂಟಿಬಯಾಟಿಕ್ ಔಷಧಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ಆದರೆ ತಪ್ಪು ಆ್ಯಂಟಿಬಯಾಟಿಕ್ ಔಷಧ ಸೇವನೆ, ಔಷಧ ಸೇವನೆಯನ್ನು ಚಿಕಿತ್ಸೆಯ ಅವಧಿ ಪೂರ್ಣಗೊಳ್ಳುವ ಮೊದಲೇ ನಿಲ್ಲಿಸುವುದು... ಇತ್ಯಾದಿಗಳಿಂದ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು ರೋಗ ನಿರೋಧಕ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಲು ಕಾರಣ ಎಂದು ವರದಿ ತಿಳಿಸಿದೆ.