ಉಡಾನ್: 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ
ಹೊಸದಿಲ್ಲಿ, ಮೇ 11: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಉಡಾನ್’ನಡಿ ಕಾರ್ಯ ನಿರ್ವಹಿಸುವ ವಿಮಾನಯಾನ ಸಂಸ್ಥೆಗಳು ಹಣದುಬ್ಬರದ ಗತಿಗೆ ಅನುಗುಣವಾಗಿ ಪ್ರತೀ ಮೂರು ತಿಂಗಳಿಗೊಮ್ಮೆ ವಾಯುಯಾನ ದರವನ್ನು ಪರಿಷ್ಕರಿಸಲಿವೆ. ಕಾರ್ಯ ನಿರ್ವಹಿಸದ ವಿಮಾನ ನಿಲ್ದಾಣಗಳನ್ನು ಮತ್ತು ಹೆಚ್ಚು ವಿಮಾನಯಾನ ಸೌಲಭ್ಯ ಇಲ್ಲದ ವಿಮಾನ ನಿಲ್ದಾಣಗಳನ್ನು ಕಡಿಮೆ ದರದಲ್ಲಿ ಸಂಪರ್ಕಿಸುವ ಕೇಂದ್ರ ಸರಕಾರದ ಯೋಜನೆಯಾದ ಉಡಾನ್(ಉಡೇ ದೇಶ್ ಕ ಆಮ್ ನಾಗರಿಕ್) ನಡಿ, ಕಳೆದ ತಿಂಗಳು ಪ್ರಪ್ರಥಮ ವಿಮಾನಯಾನವನ್ನು ಶಿಮ್ಲಾದಿಂದ ದಿಲ್ಲಿಗೆ ಕೈಗೊಳ್ಳಲಾಗಿತ್ತು. ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡುವ ಅವಕಾಶ ಪಡೆಯಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ವಿಮಾನ ಯಾನ ಸಂಸ್ಥೆಗಳು ತಮ್ಮ ಸಾಮರ್ಥ್ಯದ ಶೇ.50ರಷ್ಟು ಸೀಟುಗಳನ್ನು ರಿಯಾಯಿತಿ ದರದಲ್ಲಿ ಪ್ರಯಾಣಿಸುವವರಿಗೆ ಮೀಸಲಿಡಬೇಕಿದೆ. ಪ್ರತೀ ಗಂಟೆಗೆ 2,500 ರೂ. ಟಿಕೆಟ್ ದರವಾಗಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.