‘ರಜೆ ಕಡಿತ’ದ ರಾಜಕೀಯ!

Update: 2017-05-15 18:27 GMT

ಮಾನ್ಯರೆ, 

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರ ಇತ್ತೀಚೆಗೆ 15 ದಿನ ಸರಕಾರಿ ಕಚೇರಿಗಳ ಹಾಗೂ ಶಾಲೆಗಳ ರಜೆ ಕಡಿತಗೊಳಿಸಿದ್ದಕ್ಕಾಗಿ ಹೊಗಳಿಕೆಯ ಸುರಿಮಳೆಯಾಯಿತು ಹಾಗೂ ಇತರ ರಾಜ್ಯಗಳೂ ಅದನ್ನು ಅನುಸರಿಸಬೇಕು ಎಂದು ಕೆಲವರ ಬೇಡಿಕೆ ಬಂತು. ಆದರೆ ಇವರು ಇಲ್ಲಿ ಮೂಲ ವಿಷಯವನ್ನೇ ಸರಿಯಾಗಿ ಗಮನಿಸಿಲ್ಲ. ಉತ್ತರಪ್ರದೇಶದಲ್ಲಿ ಅಖಿಲೇಶ್ ಸರಕಾರ ಇರುವಾಗ ಶಾಲೆಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ಒಟ್ಟು 46 ರಜಾದಿನಗಳಿದ್ದವು. ಅವುಗಳಲ್ಲಿ ಯೋಗಿ ಕೇವಲ 15 ದಿನ ಕಡಿತಗೊಳಿಸಿದ್ದು. ಅಂದರೆ ಇನ್ನೂ 31 ದಿನಗಳ ರಜೆ ಉಳಿದುಕೊಂಡಿವೆ. ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಲೆಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ಒಟ್ಟು ರಜೆ ಇರುವುದು ಕೇವಲ 21 ದಿನ ಮಾತ್ರ. ಇದರಲ್ಲಿ ರವಿವಾರ ಬರುವ ಹಬ್ಬ ಹಾಗೂ ಬ್ಯಾಂಕುಗಳಿಗೆ ಮಾತ್ರ ಇರುವ ವಾರ್ಷಿಕ ಲೆಕ್ಕಾಚಾರ ರಜೆ ಸೇರಿಲ್ಲ. ಇದಕ್ಕೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಇನ್ನೂ ಹತ್ತು ದಿನ ರಜೆ ಹೆಚ್ಚು ಇದೆ. ಈ ಹೆಚ್ಚಿನ ಹತ್ತು ದಿನ ರಜೆಗಳನ್ನೂ ಯೋಗಿ ಕಡಿಮೆ ಮಾಡಿದರೆ ಆಗ ಅವರನ್ನು ಸಮರ್ಥ ಆಡಳಿತಗಾರ ಎಂದು ಒಪ್ಪಬಹುದು.

ಒಂದು ವೇಳೆ ಉತ್ತರ ಪ್ರದೇಶದಲ್ಲಿ ಮೊದಲು ಬಿಜೆಪಿ ಆಡಳಿತವಿದ್ದು ಅವರು 46 ದಿನ ರಜೆ ಕೊಟ್ಟಿದ್ದರೆ ಹಾಗೂ ಅದನ್ನೇ ಕಾಂಗ್ರೆಸ್ ಅಥವಾ ಅಖಿಲೇಶ್-ಮಾಯಾವತಿ ಸರಕಾರ ಕಡಿತಗೊಳಿಸಿದ್ದರೆ ಸಂಘ ಪರಿವಾರದ ಪ್ರತಿಕ್ರಿಯೆ ಹೇಗಿರುತ್ತಿತ್ತು ಗೊತ್ತೇ? ಹಿಂದೂ ಸಂತರ ಹಾಗೂ ಗಣ್ಯರ ಜಯಂತಿಯ ರಜೆ ಕಡಿತಗೊಳಿಸಿ ರಾಜ್ಯ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ತೊಡಗಿದೆ ಹಾಗೂ ಹಿಂದೂ ಗಣ್ಯರ ರಜೆ ಕಡಿತದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಬೊಬ್ಬಿರಿಯುತ್ತಾ ಬೀದಿಗಿಳಿದು ಸರಕಾರಿ ಆಸ್ತಿ ನಾಶ ಮಾಡಿ ತಮ್ಮ ರೋಷ ತೋರಿಸದೆ ಬಿಡುತ್ತಿರಲಿಲ್ಲ. ಕೇರಳದಲ್ಲಿ ಓಣಂ ಹಬ್ಬವನ್ನು ಎಲ್ಲಾ ಮಲೆಯಾಳಿಗಳು ಬಲೀಂದ್ರನ ಮರಳುವಿಕೆಯ ದಿನವಾಗಿ ಆಚರಿಸಿದರೆ ಬಿಜೆಪಿ ಮತ್ತು ಆರೆಸ್ಸೆಸ್ಸಿನವರು ಓಣಂ ಹಬ್ಬವನ್ನು ‘ವಾಮನ ಜನ್ಮ ದಿನ’ವಾಗಿ ಆಚರಿಸಬೇಕು ಎಂದು ಕಿರುಚಾಡಿದ್ದು ಜನರಿಗೆ ನೆನಪಿದೆ. ಉತ್ತರ ಭಾರತದ ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿ ಪರಶುರಾಮ ಜಯಂತಿಯನ್ನೂ ಆಚರಿಸಲಾಗುತ್ತದೆ. ಗೋವನ್ನು ರಾಜಕೀಯ ಲಾಭಕ್ಕೆ ಬಳಸಿರುವ ಬಿಜೆಪಿ ಸದ್ಯದಲ್ಲಿಯೇ ಆ ರಾಜ್ಯಗಳಲ್ಲಿ ‘‘ಕಾಮಧೇನು ಜನ್ಮದಿನ’’ ಎಂದು ಒಂದು ಹೊಸ ರಜೆ ಘೋಷಿಸಿದರೆ ಆಶ್ಚರ್ಯವಿಲ್ಲ.

Writer - -ಕೇಶವರಾಮ ಅಡಪ, ಕಿನ್ನಿಗೋಳಿ

contributor

Editor - -ಕೇಶವರಾಮ ಅಡಪ, ಕಿನ್ನಿಗೋಳಿ

contributor

Similar News