ಉತ್ತಮ ಆರಂಭ ಪಡೆದು ಕಳಪೆ ಅಂತ್ಯಹಾಡಿದ ಸನ್‌ರೈಸರ್ಸ್
ಹೈದರಾಬಾದ್, ಮೇ 19: ಈ ವರ್ಷದ ಐಪಿಎಲ್ ಆರಂಭವಾಗುವ ಮೊದಲು ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಎರಡು ಬಲಿಷ್ಠ ತಂಡಗಳ ಪೈಕಿ ಒಂದಾಗಿ ಗುರುತಿಸಿಕೊಂಡಿತ್ತು. ಈ ವರ್ಷದ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಹೈದರಾಬಾದ್ ತಂಡ ಬೆಂಗಳೂರಿನಲ್ಲಿ ನಡೆದಿದ್ದ ಮಳೆಬಾಧಿತ ಎಲಿಮಿನೇಟರ್ ಸುತ್ತಿನಲ್ಲಿ ಕೋಲ್ಕತಾ ವಿರುದ್ಧ ಮುಗ್ಗರಿಸಿ ಸೋಲಿನೊಂದಿಗೆ ಕೂಟಕ್ಕೆ ವಿದಾಯ ಹೇಳಿತು.
ಐಪಿಎಲ್-10ರಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಸನ್‌ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಹಾಗೂ ವೇಗದ ಬೌಲರ್ ಭುವನೇಶ್ವರ ಕುಮಾರ್ ತವರು ಮೈದಾನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಎದುರಾಳಿ ತಂಡಕ್ಕೆ ಸವಾಲಾಗಿ ಪರಿಗಣಿಸಿದ್ದರು. ಪುಣೆ ತಂಡ ಮಾತ್ರ ಸನ್‌ರೈಸರ್ಸ್‌ನ್ನು ಅದರದೇ ನೆಲದಲ್ಲಿ ಮಣಿಸಲು ಸಮರ್ಥವಾಗಿತ್ತು.
ಸನ್‌ರೈಸರ್ಸ್ ಟೂರ್ನಿಯಿಂದ ನಿರ್ಗಮಿಸಿದ ರೀತಿ ಬೇಸರವುಂಟು ಮಾಡಿದೆ. ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಡರಾತ್ರಿಯ ತನಕ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಡಿಎಲ್ ನಿಯಮದಂತೆ ಗೆಲುವಿಗೆ 6 ಓವರ್‌ಗಳಲ್ಲಿ 48 ರನ್ ಗುರಿ ಪಡೆದಿದ್ದ ಕೆಕೆಆರ್ ಸುಲಭ ಜಯ ಸಾಧಿಸಿತ್ತು.
ಸನ್‌ರೈಸರ್ಸ್ ತಂಡ 14 ಪಂದ್ಯಗಳಲ್ಲಿ 8ರಲ್ಲಿ ಜಯ, 5ರಲ್ಲಿ ಸೋಲು ಅನುಭವಿಸಿ ಒಟ್ಟು 17 ಅಂಕ ಗಳಿಸಿದ್ದು, ಒಂದು ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ. ತಂಡದ ಉತ್ತಮ ಸಾಧನೆ: ಸನ್‌ರೈಸರ್ಸ್ ತಂಡ ಪುಣೆ ವಿರುದ್ಧ ಸೋಲುವ ತನಕ ಈ ವರ್ಷ ತನ್ನ ತವರು ಮೈದಾನದಲ್ಲಿ ಅಜೇಯವಾಗುಳಿದಿತ್ತು.
ಟೂರ್ನಿಯ ಆರಂಭದಲ್ಲಿ ಆರ್‌ಸಿಬಿಯನ್ನು ಎದುರಿಸಿದ್ದ ಸನ್‌ರೈಸರ್ಸ್ 35 ರನ್‌ಗಳಿಂದ ಜಯ ಸಾಧಿಸಿತ್ತು. ಗುಜರಾತ್ ಲಯನ್ಸ್, ಪಂಜಾಬ್, ಡೆಲ್ಲಿ ಹಾಗೂ ಕೆಕೆಆರ್ ವಿರುದ್ದವೂ ಜಯಭೇರಿ ಬಾರಿಸಿತ್ತು. ಪುಣೆ ತಂಡ ವೇಗದ ಬೌಲರ್ ಜೈದೇವ್ ಉನದ್ಕಟ್ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಸನ್‌ರೈಸರ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು. ಪಂಜಾಬ್ ತಂಡ ಸನ್‌ರೈಸರ್ಸ್ ವಿರುದ್ಧ 160 ರನ್ ಚೇಸಿಂಗ್‌ನ ವೇಳೆ ಗೆಲುವಿನ ಹೊಸ್ತಿಲಲ್ಲಿ ಎಡವಿತ್ತು.
ಕಳಪೆ ಪ್ರದರ್ಶನ: ಐಪಿಎಲ್‌ನ ಎಲಿಮಿನೇಟರ್ ಸುತ್ತಿನಲ್ಲಿ ಸನ್‌ರೈಸರ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಸನ್‌ರೈಸರ್ಸ್ ದೊಡ್ಡ ಮೊತ್ತ ಗಳಿಸಲು ವಿಫಲವಾಯಿತು. ನಾಯಕ ವಾರ್ನರ್ 37 ರನ್ ಗಳಿಸಿದ್ದರು. ಸನ್‌ರೈಸರ್ಸ್ ಬ್ಯಾಟಿಂಗ್ ಕೊನೆಗೊಂಡ ತಕ್ಷಣ ಧಾರಾಕಾರ ಮಳೆ ಸುರಿಯಿತು. 2ನೆ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಡಿಎಲ್ ನಿಯಮದ ಲಾಭವನ್ನು ಪಡೆಯಿತು. ಗೆಲುವಿಗೆ 6 ಓವರ್‌ಗಳಲ್ಲಿ 48 ರನ್ ಗುರಿ ಪಡೆದಿತ್ತು. ನಿರೀಕ್ಷೆಯಂತೆಯೇ ಗೆಲುವಿನ ದಡ ಸೇರಿತು.
ನಾಯಕತ್ವದ ವಿಚಾರ: ನಾಯಕತ್ವದ ವಿಚಾರದಲ್ಲಿ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. 58.27ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ವಾರ್ನರ್ ಒಂದು ಶತಕ, ನಾಲ್ಕು ಅರ್ಧಶತಕಗಳಿರುವ 641 ರನ್ ಗಳಿಸಿದ್ದಾರೆ. ತಂಡದ ಪರ ಸತತ ಎರಡನೆ ವರ್ಷವೂ ರನ್ ಹೊಳೆ ಹರಿಸಿ ಗಮನ ಸೆಳೆದಿದ್ದಾರೆ. ಕೆಕೆಆರ್ ವಿರುದ್ಧ ಗಳಿಸಿದ್ದ 126 ರನ್ ವಾರ್ನರ್ ಬಾರಿಸಿದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ವೌಲ್ಯಯುತ ಆಟಗಾರ: ಡೇವಿಡ್ ವಾರ್ನರ್ ವೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದ್ದು, ಕಳೆದ ವರ್ಷದಂತೆಯೇ ಈ ವರ್ಷವೂ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದ್ದಾರೆ.
ಸನ್‌ರೈಸರ್ಸ್‌ನ ಎಲ್ಲ ಆಟಗಾರರು ಕಠಿಣ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಪ್ರತಿ ಆಟಗಾರನೂ ಕಾಣಿಕೆ ನೀಡಿದ್ದಾನೆ. ಸನ್‌ರೈಸರ್ಸ್ ತಂಡ ಟೂರ್ನಿಯಲ್ಲಿ ಎರಡು ಬಾರಿ ಮಳೆಯಿಂದಾಗಿ ತೊಂದರೆ ಅನುಭವಿಸಿತ್ತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಳೆ ಅಡ್ಡಿಯಾಗಿ ಪಂದ್ಯ ರದ್ದುಗೊಂಡ ಕಾರಣ ಅಂಕವನ್ನು ಹಂಚಿಕೊಂಡಿತ್ತು. ಆ ಪಂದ್ಯವನ್ನು ಗೆಲ್ಲುತ್ತಿದ್ದರೆ ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆಯಬಹುದಿತ್ತು. ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶ ಲಭಿಸುತ್ತಿತ್ತು. ಸನ್‌ರೈಸರ್ಸ್ ತಂಡ ತವರಿನ ಅಂಗಣದಲ್ಲಿ ಆರು ಪಂದ್ಯಗಳನ್ನು ಜಯಿಸಿದೆ. ಆದರೆ, ತವರಿನಿಂದ ಹೊರಗೆ ಆಡಿದ ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿದೆ. ಸನ್‌ರೈಸರ್ಸ್ ತಂಡ ಪ್ರತಿಕೂಲ ಹವಾಗುಣದಿಂದಾಗಿ ಟೂರ್ನಿಯನ್ನು ಸೋಲಿನೊಂದಿಗೆ ಅಂತ್ಯಗೊಳಿಸಬೇಕಾಯಿತು.