ತಿವಾರಿ ನಿಗೂಢ ಸಾವು ಪ್ರಕರಣ: ಕೊಲೆ ಮೊಕದ್ದಮೆ ದಾಖಲು
ಲಕ್ನೊ, ಮೇ 22: ನಿಗೂಢವಾಗಿ ಮೃತಪಟ್ಟಿರುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣದ ಬಗ್ಗೆ ಲಕ್ನೋದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ. ತಿವಾರಿ ಅವರ ಸೋದರ ಮಾಯಾಂಕ್ ಎಫ್‌ಐಆರ್ ದಾಖಲಿಸಿದ ಬಳಿಕ ಭಾರತೀಯ ದಂಡ ಸಂಹಿತೆಯ 302 ಸೆಕ್ಷನ್‌ನಡಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ (ಮೇ 22ರಂದು) ಬೆಳಿಗ್ಗೆ ತಿವಾರಿ ಕುಟುಂಬದವರು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು. ಈ ಕೋರಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮಾಯಾಂಕ್ ತಿಳಿಸಿದ್ದಾರೆ. ಇದು ಖಂಡಿತಾ ಕೊಲೆ ಪ್ರಕರಣ. ಅನುರಾಗ್ ತಂಗಿದ್ದ ಕೋಣೆಯ ಬಾಗಿಲಿನ ಬೀಗ ತೆರೆದ ಸ್ಥಿತಿಯಲ್ಲಿತ್ತು ಮತ್ತು ಅವರ ಮೊಬೈಲ್ ಫೋನ್ ಕೂಡಾ ‘ಅನ್‌ಲಾಕ್’ ಆದ ಸ್ಥಿತಿಯಲ್ಲಿತ್ತು ಎಂದವರು ಹೇಳಿದ್ದಾರೆ.
ನನ್ನ ಮಗನ ಸಾವಿನ ಬಗ್ಗೆ ಪಕ್ಷಪಾತ ರಹಿತ ತನಿಖೆಯ ಅಗತ್ಯವಿದ್ದು ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಅನಾರೋಗ್ಯ ಪೀಡಿತರಾಗಿರುವ ತಿವಾರಿಯ ತಾಯಿ ಸುಶೀಲಾ ಹೇಳಿದ್ದಾರೆ.
ಆದರೆ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ತನ್ನ ವರದಿ ಒಪ್ಪಿಸಿದ ಬಳಿಕವಷ್ಟೇ ರಾಜ್ಯ ಸರಕಾರ ಸಿಬಿಐ ತನಿಖೆಯ ಬಗ್ಗೆ ನಿರ್ಧಾರ ಪ್ರಕಟಿಸಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಇನ್ನೆರಡು ದಿನದಲ್ಲಿ ‘ಎಸ್‌ಐಟಿ’ ವರದಿ ಸಲ್ಲಿಸುವ ನಿರೀಕ್ಷೆಯಿೆ.
ಕರ್ನಾಟಕ ಪದವೃಂದದ ಐಎಎಸ್ ಅಧಿಕಾರಿಯಾಗಿರುವ ತಿವಾರಿ ಮೇ 17ರಂದು ಹಝರತ್‌ಗಂಜ್‌ನಲ್ಲಿರುವ ಉ.ಪ್ರದೇಶ ರಾಜ್ಯ ಸರಕಾರದ ಪ್ರವಾಸಿ ಬಂಗಲೆಯ ಬಳಿ ಶವವಾಗಿ ಪತ್ತೆಯಾಗಿದ್ದರು. ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ತಿವಾರಿ, ಟೆಂಡರ್ ವಿಷಯದಲ್ಲಿ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ವಿರೆಧ ಕಟ್ಟಿಕೊಂಡಿದ್ದರು ಎನ್ನಲಾಗಿದೆ.