ಇಟಾಲಿಯನ್ ಓಪನ್: ಜೊಕೊವಿಕ್‌ಗೆ ಶಾಕ್ ನೀಡಿದ ಝ್ವೆರೆವ್‌ಗೆ ಪ್ರಶಸ್ತಿ

Update: 2017-05-22 18:05 GMT

ರೋಮ್, ಮೇ 21: ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ವಿಶ್ವದ ನಂ.2ನೆ ಆಟಗಾರ ನೊವಾಕ್ ಜೊಕೊವಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿ ಇಟಾಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 20ರ ಹರೆಯದ ಝ್ವೆರೆವ್ ಅವರು ಜೊಕೊವಿಕ್‌ರನ್ನು 6-4, 6-3 ಸೆಟ್‌ಗಳಿಂದ ಮಣಿಸಿ ವೃತ್ತಿಜೀವನದಲ್ಲಿ ಬಹುದೊಡ್ಡ ಗೆಲುವು ದಾಖಲಿಸಿದರು.

ಪ್ರಸ್ತುತ ಶ್ರೇಷ್ಠ ಫಾರ್ಮ್‌ನಲ್ಲಿದ್ದ ಝ್ವೆರೆವ್ ತನ್ನ ಮೊದಲ ಗೇಮ್‌ನಲ್ಲೇ ಹಿರಿಯ ಆಟಗಾರ ಜೊಕೊವಿಕ್ ವಿರುದ್ಧ ಮೇಲುಗೈ ಸಾಧಿಸಿದ್ದರು. ಮಾಸ್ಟರ್-1000 ಟೂರ್ನಮೆಂಟ್‌ನ್ನು ಜಯಿಸಿದ ಕಿರಿಯ ಆಟಗಾರ ಎನಿಸಿಕೊಂಡರು. ಸರ್ಬಿಯದ ಜೊಕೊವಿಕ್ 2007ರಲ್ಲಿ ತನ್ನ ಕಿರಿಯ ವಯಸ್ಸಿನಲ್ಲಿ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.

ಜೊಕೊವಿಕ್ ಕಳೆದ ವರ್ಷದ ಜೂನ್‌ನಲ್ಲಿ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆದ ಬಳಿಕ ಗಾಯದ ಸಮಸ್ಯೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಶನಿವಾರ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಡೊಮಿನಿಕ್ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಜೊಕೊವಿಕ್ ರವಿವಾರದ ಫೈನಲ್‌ನಲ್ಲಿ ತನ್ನ ಹಿಂದಿನ ಫಾರ್ಮ್ ಪ್ರದರ್ಶಿಸಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News