ದಿಲ್ಲಿ ಬಿಎಸ್‌ಪಿ ನಾಯಕನ ಕುಟುಂಬದ ಕೊಲೆ ಮಾಡಿಸಿದ ಬಳಿಕ ಆತನೊಂದಿಗೇ ಓಡಾಡಿಕೊಂಡಿದ್ದ ಆರೋಪಿ!

Update: 2017-05-23 09:41 GMT
ಮುನಾವರ್ ಹಸನ್

ಹೊಸದಿಲ್ಲಿ,ಮೇ 23: 2015ರಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ದಿಲ್ಲಿಯ ತಿಹಾರ ಜೈಲು ಸೇರಿದ್ದ ಬಿಎಸ್‌ಪಿ ನಾಯಕ ಮುನಾವರ್ ಹಸನ್‌ಗೆ ಮೇ 17ರಂದು ಜಾಮೀನು ದೊರಕಿದ ತಕ್ಷಣ ಉತ್ತರ ದಿಲ್ಲಿಯ ಬುರಾರಿ ಯಲ್ಲಿರುವ ತನ್ನ ನಿವಾಸಕ್ಕೆ ಧಾವಿಸಿದ್ದ. ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳು ಎ.20ರಿಂದ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಆತನಿಗೆ ಜೈಲಿನಲ್ಲಿದ್ದಾಗಲೇ ಲಭಿಸಿತ್ತು.

 ಇಬ್ಬರು ಪುತ್ರಿಯರು ಸೇರಿದಂತೆ ತನ್ನ ಕುಟುಂಬ ಅಪಾಯಕ್ಕೆ ಸಿಲುಕಿತ್ತು ಎನ್ನುವುದು ಆತನಿಗೆ ಕೆಲವೇ ಹೊತ್ತಿನಲ್ಲಿ ಗೊತ್ತಾಗಿತ್ತು. ಮರುದಿನ ಬೆಳಿಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನು ಆತ ದಾಖಲಿಸಿದ್ದ.

ಇದಾದ ಎರಡೇ ದಿನಗಳ ಬಳಿಕ ಶನಿವಾರ ಹಸನ್ ತನ್ನ ಮನೆಯ ಬಾತ್‌ರೂಮಿನಲ್ಲಿ ಕೊಲೆಯಾಗಿ ಬಿದ್ದಿದ್ದ. ಆತನ ಪತ್ನಿ ಇಷ್ರತ್(40), ಪುತ್ರಿಯರಾದ ಅರ್ಜು(19) ಮತ್ತು ಅರ್ಷಿ(15), ಪುತ್ರರಾದ ಆಕಿಬ್(20) ಮತ್ತು ಶಾಕಿಬ್(16) ಅವರೂ ಒಂದು ತಿಂಗಳ ಹಿಂದೆಯೇ ಕೊಲೆಯಾಗಿದ್ದಾರೆ ಮತ್ತು ಈ ಎಲ್ಲ ಕೊಲೆಗಳನ್ನು ಮಾಡಿದ್ದು ಮುನಾವರ್‌ನ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಸಾಹಿದ್ ಖಾನ್ ಅಲಿಯಾಸ್ ಬಂಟಿ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ.

ಮುನಾವರ್‌ಗೆ ಜಾಮೀನು ದೊರಕಿಸುವ ಪ್ರಕ್ರಿಯೆಯಿಂದ ಹಿಡಿದು ಆತನ ಕುಟುಂಬ ಸದಸ್ಯರಿಗಾಗಿ ಹುಡುಕಾಟದವರೆಗೂ ಬಂಟಿ ಆತನ ಜೊತೆಯಲ್ಲಿಯೇ ಓಡಾಡಿ ಕೊಂಡಿದ್ದ. ತಾನು ಹೊಂದಿದ್ದ ವಿವಾದಿತ ಆಸ್ತಿಗಳನ್ನು ಕಬಳಿಸಲು ತನ್ನನ್ನೇ ಮುಗಿಸಲು ಬಂಟಿ ಹೊಂಚು ಹಾಕುತ್ತಿದ್ದಾನೆ ಎನ್ನುವುದು ಮಾತ್ರ ಮುನಾವರ್‌ಗೆ ಗೊತ್ತೇ ಆಗಿರಲಿಲ್ಲ.

ಬುರಾರಿಯ ಭಗತ್ ಕಾಲನಿಯ ಎರಡನೇ ಅಂತಸ್ತಿನಲ್ಲಿರುವ ಮುನಾವರ್‌ನ ಫ್ಲಾಟ್ ಕೂಡ ವಿವಾದದಲ್ಲಿದೆ. ಮುನಾವರ್ ಅಕ್ರಮವಾಗಿ ಈ ಫ್ಲಾಟ್‌ನಲ್ಲಿ ವಾಸವಿದ್ದು, ಆತನನ್ನು ಒಕ್ಕಲೆಬ್ಬಿಸಲು ಮಾಲಕ ಫೂಲ್ ಸಿಂಗ್ ಸುದೀರ್ಘ ಕಾಲದಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾನೆ.

ಅಂದ ಹಾಗೆ ಮುನಾವರ್ ಕೊಲೆ ಬಗ್ಗೆ ಖುದ್ದು ಬಂಟಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಮುನಾವರ್‌ಗೆ ಪದೇ ಪದೇ ಫೋನ್‌ಕರೆಗಳನ್ನು ಮಾಡಿದ್ದರೂ ಆತ ಸ್ವೀಕರಿಸಿರಲಿಲ್ಲ, ಹೀಗಾಗಿ ವಿಷಯವೇನೆಂದು ತಿಳಿಯಲು ಆತನ ಮನೆಗೆ ತೆರಳಿದ್ದೆ ಮತ್ತು ಆತ ಗುಂಡೇಟಿನಿಂದ ಸತ್ತುಬಿದ್ದಿದ್ದು ಬೆಳಕಿಗೆ ಬಂದಿತ್ತು ಎಂದು ಆತ ತನ್ನನ್ನು ಪ್ರಶ್ನಿಸಿದ್ದ ಪೊಲೀಸರಿಗೆ ಉತ್ತರಿಸಿದ್ದ.

ಆದರೆ ಆತನ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಹೀಗಾಗಿ ಶಂಕೆಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ ಎಲ್ಲ ಕೊಲೆಗಳನನು ತಾನೇ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಮುನಾವರ್ ಜೈಲಿನಲ್ಲಿದ್ದಾಗ ಆತನ ಕುಟುಂಬಕ್ಕೆ ನಿಕಟವಾಗಿದ್ದ ಬಂಟಿ, ಕಳೆದ ತಿಂಗಳು ಮೀರತ್‌ನಲ್ಲಿಯ ಮುನಾವರ್‌ನ ಸ್ವಗ್ರಾಮದಲ್ಲಿ ತುರ್ತು ಸಂದರ್ಭವೊಂದು ಒದಗಿಬಂದಿದೆ ಎಂದು ನಂಬಿಸಿ ಇಷ್ರತ್ ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ತನ್ನೊಂದಿಗೆ ಕರೆದೊಯ್ದಿದ್ದ. ಆದರೆ ಮಾರ್ಗಮಧ್ಯೆಯೇ ಅವರನ್ನು ಗುಂಡಿಟ್ಟು ಕೊಲ್ಲಲಾ ಗಿತ್ತು ಮತ್ತು ಶವಗಳನ್ನು ಹೆದ್ದಾರಿ ಪಕ್ಕದ ಹೊಲಗಳಲ್ಲಿ ಹೂಳಲಾಗಿತ್ತು. ತಕ್ಷಣವೇ ದಿಲ್ಲಿಗೆ ಮರಳಿದ್ದ ಆತ ಆಕಿಬ್ ಮತ್ತು ಶಾಕಿಬ್‌ರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಸನ್‌ಗೆ ಸೇರಿದ ವಿವಾದಿತ ಜಾಗವೊಂದರಲ್ಲಿ ಅವರ ಶವಗಳನ್ನೂ ಹೂತುಹಾಕಿದ್ದ. ಈ ಎಲ್ಲ ಕೊಲೆಗಳಿಗಾಗಿ ಆತ ಸುಪಾರಿ ಹಂತಕರಾದ ಫಿರೋಝ್ ಮತ್ತು ಝುಲ್ಫಿಕರ್ ಎನ್ನುವವರನ್ನು ಬಳಸಿಕೊಂಡಿದ್ದ.

ಪೊಲೀಸರು ಸೋಮವಾರ ರಾತ್ರಿ ಮುನಾವರ್‌ನ ಪುತ್ರರ ಶವಗಳ ಅವಶೇಷಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಷ್ರತ್ ಮತ್ತು ಪುತ್ರಿಯರ ಶವಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದ್ದು, ಅದಕ್ಕಾಗಿ ಪೊಲೀಸರ ತಂಡವೊಂದು ಉತ್ತರ ಪ್ರದೇಶಕ್ಕೆ ತೆರಳಿದೆ.

ಬಂಟಿ,ಆತನ ನೌಕರ ದೀಪಕ್,ಫಿರೋಝ್ ಮತ್ತು ಝುಲ್ಫಿಕರ್ ಅವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News