ನಿವೃತ್ತ ಸಿಆರ್‌ಪಿಎಫ್ ಅಧಿಕಾರಿಗೆ ಕೆನಡ ಪ್ರವೇಶ ನಿರಾಕರಣೆ

Update: 2017-05-24 11:31 GMT

‘ಭಯೋತ್ಪಾದನೆ, ವ್ಯವಸ್ಥಿತ ಅಥವಾ ಸಾರಾಸಗಟು ಮಾನವಹಕ್ಕು ಉಲ್ಲಂಘನೆ ಅಥವಾ ಜನಾಂಗ ಹತ್ಯೆ’ಯಲ್ಲಿ ತೊಡಗಿದ ಸರಕಾರವೊಂದರಲ್ಲಿ ಈ ವ್ಯಕ್ತಿ ಸೇವೆ ಸಲ್ಲಿಸಿದ್ದರು ಎಂದು ವಿವರಣೆ ನೀಡಿದ ಅಧಿಕಾರಿಗಳು!

ಒಟ್ಟಾವ (ಕೆನಡ), ಮೇ 23: ಭಾರತದ ಹಿರಿಯ ನಿವೃತ್ತ ಸಿಆರ್‌ಪಿಎಫ್ ಅಧಿಕಾರಿಯೊಬ್ಬರಿಗೆ ಕೆನಡದ ವ್ಯಾಂಕೂವರ್ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಕಳೆದ ವಾರ ನಡೆದಿದೆ. ಭಯೋತ್ಪಾದನೆ, ವ್ಯವಸ್ಥಿತ ಅಥವಾ ಸಾರಾಸಗಟು ಮಾನವಹಕ್ಕು ಉಲ್ಲಂಘನೆ ಅಥವಾ ಜನಾಂಗ ಹತ್ಯೆ’ಯಲ್ಲಿ ತೊಡಗಿದ ಸರಕಾರವೊಂದರಲ್ಲಿ ಈ ವ್ಯಕ್ತಿ ಸೇವೆ ಸಲ್ಲಿಸಿದ್ದರು ಎಂಬ ಕಾರಣಕ್ಕಾಗಿ ವಲಸೆ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.

ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆಯಿಂದ 2010ರಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ದರ್ಜೆಯೊಂದಿಗೆ ನಿವೃತ್ತಿಗೊಂಡ ತೇಜಿಂದರ್ ಸಿಂಗ್ ಧಿಲ್ಲೋನ್ ಪ್ರವೇಶ ನಿಷೇಧವನ್ನು ಎದುರಿಸಿದವರು. ಕೆನಡದ ವಲಸೆ ಮತ್ತು ನಿರಾಶ್ರಿತರ ರಕ್ಷಣಾ ಕಾಯ್ದೆಯ ಉಪ ಪರಿಚ್ಛೇದವೊಂದರ ಅಡಿಯಲ್ಲಿ ಧಿಲ್ಲೋನ್‌ಗೆ ಕೆನಡ ಪ್ರವೇಶ ನಿಷೇಧಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಧಿಲ್ಲೋನ್‌ಗೆ ದಾಖಲೆಯೊಂದನ್ನು ನೀಡಲಾಯಿತು. ‘‘ಭಯೋತ್ಪಾದನೆ, ವ್ಯವಸ್ಥಿತ ಅಥವಾ ಸಾರಾಸಗಟು ಮಾನವಹಕ್ಕುಗಳ ಉಲ್ಲಂಘನೆ, ಅಥವಾ ಜನಾಂಗ ಹತ್ಯೆ, ಯುದ್ಧಾಪರಾಧ ಅಥವಾ ಮಾನವತೆಯ ವಿರುದ್ಧದ ಅಪರಾಧ’’ದಲ್ಲಿ ತೊಡಗಿದ ಸರಕಾರವೊಂದರ ಸೇವೆಯಲ್ಲಿ ನೀವು ಹಿರಿಯ ಅಧಿಕಾರಿಯಾಗಿದ್ದಿರಿ’’ ಎಂದು ಆ ದಾಖಲೆ ಹೇಳುತ್ತದೆ. ವ್ಯಾಂಕೂವರ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಹೊರಡಿಸಿದ ಎರಡನೆ ವರದಿಯಲ್ಲಿ ಮೇಲೆ ವಿವರಿಸಿದ ರೀತಿಯಲ್ಲಿನ ಭಾರತದ ಬಣ್ಣನೆಯನ್ನು ಕೈಬಿಡಲಾಗಿದೆ. ಆದಾಗ್ಯೂ, ನೀವು ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿರುವುದರಿಂದ ಕೆನಡಕ್ಕೆ ನಿಮಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಪಟ್ಟುಹಿಡಿದರು ಎನ್ನಲಾಗಿದೆ. ಹಿಂಸೆ, ಸ್ವೇಚ್ಛಾಚಾರದ ಬಂಧನ, ಕೊಲೆ ಮತ್ತು ಲೈಂಗಿಕ ಆಕ್ರಮಣದಂಥ ವ್ಯವಸ್ಥಿತ ಮಾನವಹಕ್ಕು ಉಲ್ಲಂಘನೆಯಲ್ಲಿ ತೊಡಗಿದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿರುವುದೇ ಇದಕ್ಕೆ ಕಾರಣ ಎಂದು ಅವರಿಗೆ ತಿಳಿಸಲಾಯಿತು.

ಬಳಿಕ ಅವರು ಲುಧಿಯಾನಕ್ಕೆ ಹಿಂದಿರುಗಿದರು.

ಭಾರತ ಖಂಡನೆ

ಬಂಡುಕೋರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರತದ ನಿವೃತ್ತ ಅಧಿಕಾರಿಯೊಬ್ಬರಿಗೆ ಕಳೆದ ವಾರ ಕೆನಡ ಪ್ರವೇಶಿಸಲು ಅವಕಾಶ ನಿರಾಕರಿಸಿದ ಕೆನಡ ಸರಕಾರದ ಕ್ರಮವನ್ನು ಭಾರತ ಖಂಡಿಸಿದೆ. ‘‘ಸಿಆರ್‌ಪಿಎಫ್‌ನಂಥ ಪ್ರತಿಷ್ಠಿತ ಪಡೆಯನ್ನು ಈ ರೀತಿಯಾಗಿ ಬಣ್ಣಿಸುವುದು ಅಸ್ವೀಕಾರಾರ್ಹ. ಕೆನಡ ಸರಕಾರದೊಂದಿಗೆ ನಾವು ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ’’ ಎಂದು ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News