ಭಯೋತ್ಪಾದನೆಗೆ ಹಣ ಪೂರೈಕೆ: ಬಿಜೆಪಿ ಮುಖಂಡನ ಸಹಿತ ಮೂವರಿಗೆ ಜೀವಾವಧಿ ಶಿಕ್ಷೆ
ಗುವಾಹಟಿ,ಮೇ 24: ರಾಜ್ಯದಲ್ಲಿಯ ಭಯೋತ್ಪಾದಕ ಸಂಘಟನೆಯೊಂದಕ್ಕೆ ಆರ್ಥಿಕ ನೆರವನ್ನೊದಗಿಸಲು ಸರಕಾರಿ ಹಣವನ್ನು ದುರುಪಯೋಗ ಮಾಡಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಉಗ್ರಗಾಮಿ-ಹಾಲಿ ಬಿಜೆಪಿ ನಾಯಕ ಮತ್ತು ಇಬ್ಬರು ಸರಕಾರಿ ಅಧಿಕಾರಿಗಳು ಸೇರಿದಂತೆ ಮೂವರಿಗೆ ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ನ್ಯಾಯಾಲಯವು ಸೋಮವಾರ ಈ ಎರಡು ಪ್ರಕರಣಗಳಲ್ಲಿ ಒಟ್ಟು 15 ಜನರನ್ನು ದೋಷಿಗಳೆಂದು ಘೋಷಿಸಿತ್ತು. ಇವು ಎನ್‌ಐಎ 2009ರಲ್ಲಿ ಸ್ಥಾಪನೆಗೊಂಡ ಬಳಿಕ ಅದಕ್ಕೆ ಹಸ್ತಾಂತರಿಸಲಾಗಿದ್ದ ಮೊದಲ ಪ್ರಕರಣಗಳಾ ಗಿವೆ.
ಇತರರಿಗೆ ವಿವಿಧ ಅವಧಿಗಳ ಜೈಲುಶಿಕ್ಷೆಯನು ವಿಧಿಸಲಾಗಿದೆ. ಭಯೋತ್ಪಾದಕ ಸಂಘಟನೆ ದಿಮಾ ಹಲಾಂ ದಾವೋಗಾ(ಡಿಎಚ್‌ಡಿ-ಜೆ) ಅಥವಾ ಬ್ಲಾಕ್ ವಿಡೋದ ಮಾಜಿ ಸ್ವಘೋಷಿತ ಕಮಾಂಡರ್-ಇನ್-ಚೀಫ್ ನಿರಂಜನ ಹೋಜಾಯಿ, ಡಿಎಚ್‌ಡಿ-ಜೆಯ ಸ್ವಘೋಷಿತ ಅಧ್ಯಕ್ಷ ಜುವೆಲ್ ಗರ್ಲೋಸಾ ಮತ್ತು ಮೋಹೆತ್ ಹೋಜಾಯಿ ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ದೋಷಿಗಳಾಗಿದ್ದಾರೆ. ಈ ಪೈಕಿ ನಿರಂಜನ ಆಡಳಿತಕ್ಕೆ ಶರಣಾಗಿ, ಬಳಿಕ ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡು ಉತ್ತರ ಕಾಚಾರ್ ಗುಡ್ಡಗಾಡು ಸ್ವಾಯತ್ತ ಜಿಲ್ಲಾ ಮಂಡಳಿಗೆ ಆಯ್ಕೆಯಾಗಿದ್ದರೆ, ಗರ್ಲೋಸಾ ಮಂಡಳಿಯ ಹಾಲಿ ಪಕ್ಷೇತರ ಸದಸ್ಯನಾಗಿದ್ದಾನೆ. ಮೋಹೆತ್ ಮಂಡಳಿಯ ಮಾಜಿ ಮುಖ್ಯ ಕಾರ್ಯಕಾರಿ ಸದಸ್ಯನಾಗಿದ್ದಾನೆ.
ಪ್ರಕರಣದಿಂದ ನಿರಂಜನನನ್ನು ಪಾರು ಮಾಡಲು ಗುವಾಹಟಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವ ಸಾಧ್ಯಾಸಾಧ್ಯತೆಯನ್ನು ಅಸ್ಸಾಂ ಬಿಜೆಪಿಯು ಪರಿಶೀಲಿಸುತ್ತಿದೆ ಎಂದು ಪಕ್ಷದ ರಾಜ್ಯ ವಕ್ತಾರ ಬಿಜನ್ ಮಹಾಜನ್ ತಿಳಿಸಿದರು.
ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹಾಗೂ ಮಂಡಳಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಆರ್.ಎಚ್.ಖಾನ್, ಗುತ್ತಿಗೆದಾರ ಪೂಜೇಂದ್ರ ಹೋಜಾಯಿ, ಡಿಎಚ್‌ಡಿ-ಜೆ ಸದಸ್ಯ ಅಷ್ರಿಂಗ್ದಾವೊ ವರಿಸಾ, ಮಿರೆರಾಮ್‌ನ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ವನ್ಲಾಲ್‌ಚನಾ ಮತ್ತು ಕೋಲ್ಕತಾದ ಗುತ್ತಿಗೆದಾರ ಜಯಂತ ಕುಮಾರ ಘೋಷ್ ಅವರಿಗೆ 10 ಮತ್ತು 12 ವರ್ಷಗಳ ಪ್ರತ್ಯೇಕ ಜೈಲು ಶಿಕ್ಷೆಗಳನ್ನು ವಿಧಿಸಲಾಗಿದೆ.
ಇವರ ಜೊತೆಗೆ ನಾಲ್ವರು ಗುತ್ತಿಗೆದಾರರು, ಓರ್ವ ಹವಾಲಾ ವ್ಯಾಪಾರಿ, ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಕರುಣಾ ಸೈಕಿಯಾ, ಇನ್ನೋರ್ವ ಸರಕಾರಿ ನೌಕರ ಜಿಬಾಂಗ್ಷು ಪಾಲ್ ಅವರು ಎಂಟು ವರ್ಷಗಳ ಎರಡು ಪ್ರತ್ಯೇಕ ಜೈಲುಶಿಕ್ಷೆಗಳಿಗೆ ಗುರಿಯಾಗಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ ಇನ್ನೋರ್ವ ಆರೋಪಿ ಸಮೀರ್ ಅಹ್ಮದ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.