ಸಾಹಸ ಪ್ರದರ್ಶಿಸಿ ಅಪಹರಣಕಾರರಿಂದ ಸಂಬಂಧಿಯನ್ನು ಕಾಪಾಡಿದ ರಾಷ್ಟೀಯ ಮಟ್ಟದ ಶೂಟರ್ ಆಯಿಷಾ

Update: 2017-05-28 15:28 GMT

ಹೊಸದಿಲ್ಲಿ, ಮೇ 28: ತನ್ನ ಕೌಶಲ್ಯ ಹಾಗೂ ಸಾಹಸವನ್ನು ಪ್ರದರ್ಶಿಸಿ ಅಪಹರಣಕಾರರ ವಶದಲ್ಲಿದ್ದ ಸಂಬಂಧಿಯನ್ನು ರಾಷ್ಟ್ರಮಟ್ಟದ ಶೂಟರ್ ಒಬ್ಬರು ಕಾಪಾಡಿದ ಘಟನೆ ನಡೆದಿದೆ.

ರಾಷ್ಟ್ರೀಯ ಮಟ್ಟದ ಶೂಟರ್ ಹಾಗೂ ಕೋಚ್ ಆಯಿಷಾ ಫಲಾಕ್ ರ ಪತಿಯ ಸಹೋದರ ಆಸಿಫ್ ರನ್ನು ಕೆಲ ದುಷ್ಕರ್ಮಿಗಳು ಅಪಹರಿಸಿದ್ದರು. ಆಸಿಫ್ ದಿಲ್ಲಿ ಯುನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದು, ತರಗತಿ ಮುಗಿದ ನಂತರ ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ದರ್ಯಾಗಂಜ್ ನಲ್ಲಿ ರಫೀ ಹಾಗೂ ಆಕಾಶ್ ಎಂಬಿಬ್ಬರು ಆಸಿಫ್ ಚಲಾಯಿಸುತ್ತಿದ್ದ ಕಾರು ಹತ್ತಿದ್ದು, ಬಾಡಿಗೆಗೆ ಸ್ಥಳವೊಂದಕ್ಕೆ ಕರೆದೊಯ್ಯುವಂತೆ ಹೇಳಿದ್ದರು. ಆದರೆ ಅರ್ಧದಲ್ಲಿ ಬೇರೆ ದಾರಿಯಲ್ಲಿ ಹೋಗುವಂತೆ ತಿಳಿಸಿ, ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದರು. ಆಸಿಫ್ ನ ಬಳಿಯಿದ್ದ ಪರ್ಸನ್ನು ಕಿತ್ತುಕೊಂಡ ದರೋಡೆಕೋರರು ಅದರಲ್ಲಿ ಕೇವಲ 150 ರೂ, ಇದ್ದುದರಿಂದ ಕೆರಳಿ ಆಸಿಫ್ ಮೇಲೆ ಹಲ್ಲೆ ನಡೆಸಿದ್ದರು.

ಇಷ್ಟೇ ಅಲ್ಲದೆ, ಆಸಿಫ್ ನ ಕುಟುಂಬವನ್ನು ಸಂಪರ್ಕಿಸಿ ಹಣ ನೀಡುವಂತೆ ಬೆದರಿಸಿ, ಒಂದು ಗಂಟೆಯೊಳಗಾಗಿ 25 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರೊಂದಿಗೆ ಆಯಿಷಾ ಹಾಗೂ ಅವರ ಪತಿ ಸ್ಥಳಕ್ಕೆ ತೆರಳಿದ್ದರು. ಪೊಲೀಸರು ಬಂದಿರುವುದನ್ನು ಕಂಡ ಅಪಹರಣಕಾರರು ಅಲ್ಲಿಂದ ಕಾಲ್ಕಿತ್ತಿದ್ದು, ಭಜನ್ಪುರಕ್ಕೆ ಬರುವಂತೆ ಆಯಿಷಾಗೆ ಕರೆ ಮಾಡಿ ತಿಳಿಸಿದ್ದರು. ಲೈಸೆನ್ಸ್ ಹೊಂದಿರುವ ಬಂದೂಕಿನೊಂದಿಗೆ ಸ್ಥಳಕ್ಕೆ ತೆರಳಿದ ಆಯಿಷಾ ಆಸಿಫ್ ನನ್ನು ರಕ್ಷಿಸಿ ಅಪಹರಣಕಾರರಲ್ಲೋರ್ವನ ಕಾಲು ಹಾಗೂ ಮತ್ತೋರ್ವನ ಸೊಂಟಕ್ಕೆ ಗುಂಡು ಹೊಡೆದರು.

ಗಾಯಗೊಂಡ ಅಪಹರಣಕಾರರು ಕೂಡಲೇ ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸಿದ್ದಾರೆ. 2015ರಲ್ಲಿ ನಡೆದ ಉತ್ತರ ವಲಯದ ಶೂಟಿಂಗ್ ಸ್ಪರ್ಧೆಯಲ್ಲಿ ಆಯಿಷಾ ಕಂಚಿನ ಪದಕ ಗಳಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News