ಇದು ನಿಜಕ್ಕೂ ಗಂಭೀರ ಸಮಸ್ಯೆ: ಗೌತಮ್ ಗಂಭೀರ್ V/S ಗೌತಮ್ ಗಂಭೀರ್ !

Update: 2017-06-02 16:24 GMT

ಹೊಸದಿಲ್ಲಿ, ಜೂ.2: ಸಾಮಾಜಿಕ ಸಮಸ್ಯೆಗಳು ಹಾಗೂ ಕೆಲ ವಿಷಯಗಳ ಬಗ್ಗೆ ನಿಷ್ಠುರವಾಗಿ ತನ್ನ ನಿಲುವನ್ನು ಪ್ರಕಟಿಸುವ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಹೊಸ ರೀತಿಯ ಸಮಸ್ಯೆಯಿಂದ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ತಮ್ಮ ಹೇಳಿಕೆಯಿಂದಲ್ಲ. ಬದಲಾಗಿ, ತಮ್ಮದೇ ಹೆಸರಿನಿಂದ!.

ಹೋಟೆಲೊಂದರ ಹೆಸರಿನ ಟ್ಯಾಗ್ ಲೈನ್ ನಲ್ಲಿ “ಬೈ ಗೌತಮ್ ಗಂಭೀರ್” ಎಂದು ಹಾಕಿರುವ ಹೊಟೇಲ್ ಮಾಲಕನ ವಿರುದ್ಧ ಗಂಭೀರ್ ಕೋರ್ಟ್ ಮೆಟ್ಟಿಲೇರಿದ್ದಾರೆ.  ಪಂಜಾಬಿ ಬಾಘ್ ಮೂಲದ ಗುಂಗ್ರೂ ರೆಸ್ಟೋರೆಂಟ್ ಬಾರ್ ಮಾಲಕನ ಹೆಸರೂ ಕೂಡ “ಗೌತಮ್ ಗಂಭೀರ್” ಆಗಿದ್ದು, ತನ್ನ ಹೊಟೇಲುಗಳಲ್ಲಿ “ಬೈ ಗೌತಮ್ ಗಂಭೀರ್” ಎಂದು ಟ್ಯಾಗ್ ಲೈನ್ ಹಾಕಿದ್ದಾರೆ. ಇದು ಕ್ರಿಕೆಟಿಗ ಗಂಭೀರ್ ಅವರ ಗಮನಕ್ಕೆ ಬಂದ ನಂತರ ಅವರು ಹೊಟೇಲ್ ಮಾಲಕರಿಗೆ ಹೆಸರನ್ನು ತೆಗೆಯುವಂತೆ ಮನವಿ ಮಾಡಿದ್ದಲ್ಲದೆ, ಲೀಗಲ್ ನೊಟೀಸ್ ಗಳನ್ನೂ ಕಳುಹಿಸಿದ್ದರು. ಆದರೆ ಹೊಟೇಲ್ ಮಾಲಕರಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ಕೆಲ ವರ್ಷಗಳಿಂದ ದಿಲ್ಲಿಯಲ್ಲಿ “ಹವಾಲತ್ ಬೈ ಗೌತಮ್ ಗಂಭೀರ್” ಹಾಗೂ “ಬ್ಲು ವೇವ್ಸ್ ಬೈ ಗೌತಮ್ ಗಂಭೀರ್ ರೆಸ್ಟೋರೆಂಟ್ ಗಳನ್ನು ನಡೆಸುತ್ತಿರುವ ಹೊಟೇಲ್ ಮಾಲಕ ಗಂಭೀರ್ “ಈ ವಿವಾದದಿಂದ ದಿಕ್ಕುತೋಚದಂತಾಗಿದ್ದೇನೆ” ಎಂದಿದ್ದಾರೆ.

ಕ್ರಿಕೆಟಿಗ ಗಂಭೀರ್ ರ ತಗಾದೆಯ ಬಗ್ಗೆ ದಿನಪತ್ರಿಕೆಗಳಿಂದಷ್ಟೇ ತಿಳಿದುಬಂದಿದೆ ಹೊರತು, ಕೋರ್ಟ್ ನಿಂದ ಯಾವುದೇ ಪತ್ರ ಬಂದಿಲ್ಲ. ಅವರು ಓರ್ವ ಪ್ರಸಿದ್ಧ ಕ್ರಿಕೆಟಿಗ ಹಾಗೂ ಸೆಲೆಬ್ರಿಟಿ. ಆದರೆ ನನಗೆ ನನ್ನದೇ ಆದ ಗುರುತಿದೆ. ಕೇವಲ ಅವರ ಹೆಸರೂ ಗೌತಮ್ ಗಂಭೀರ್ ಆಗಿರುವುದರಿಂದ ನಾನು ಹೆಸರನ್ನು ಬದಲಾಯಿಸಿಕೊಳ್ಳಬೇಕೇ “ ಎಂದು ಹೋಟೆಲ್ ಮಾಲಕ ಗೌತಮ್ ಗಂಭೀರ್ ಪ್ರಶ್ನಿಸುತ್ತಾರೆ,

“ಟ್ಯಾಗ್ ಲೈನ್ ನಲ್ಲಿರುವ ಹೆಸರು ಕ್ರಿಕೆಟಿಗ ಗೌತಮ್ ಗಂಭೀರ್ ರದ್ದು ಎಂದು ನಾನೆಲ್ಲೂ ಹೇಳಿಲ್ಲ. ಕ್ರಿಕೆಟ್ ಲೋಗೋ ಹಾಗೂ ಚಿತ್ರಗಳನ್ನು ನಾನೆಲ್ಲೂ ಬಳಸಿಲ್ಲ. ನನ್ನ ಹೆಸರು ಗೌತಮ್ ಗಂಭೀರ್ ಹಾಗೂ ನನ್ನ ಸ್ವತ್ತುಗಳಿಗೆ ನನ್ನ ಹೆಸರನ್ನು ಬಳಸುವ ಹಕ್ಕು ನನಗಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News