ಕೇರಳದಲ್ಲಿ ಅಮಿತ್ ಶಾರಿಂದ ದಲಿತ-ಅಲ್ಪಸಂಖ್ಯಾತರ ಓಲೈಕೆ

Update: 2017-06-03 11:45 GMT

  ತಿರುವನಂತಪುರಂ, ಜೂ.3: ಹಿಂಸೆಯ ಮೂಲಕ ಕೇರಳದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಯನ್ನು ತಡೆಯುವ ಪ್ರಯತ್ನಕ್ಕೆ ಯಶ ದೊರೆಯದು . ಪಕ್ಷದ ಕಾರ್ಯಕರ್ತರ ಮೇಲೆ ಸಿಪಿಎಂ ಕಾರ್ಯಕರ್ತರು ನಡೆಸುತ್ತಿರುವ ನಿರಂತರ ಆಕ್ರಮಣ ಖಂಡನೀಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

 ಕೊಚ್ಚಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ರೂಪಿಸಿರುವ ತಂತ್ರಗಾರಿಕೆಯಲ್ಲಿ ಕೇರಳ ರಾಜ್ಯ ಪ್ರಮುಖವಾಗಿದೆ. 2014ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಹಲವು ರಾಜ್ಯಗಳಲ್ಲಿ ಗೆಲುವಿನ ಪತಾಕೆ ಹಾರಿಸಿದ್ದರೂ ಕೇರಳದಲ್ಲಿ ಯಶಸ್ಸು ದೊರಕುವವರೆಗೆ ತಮಗೆ ತೃಪ್ತಿಯಿಲ್ಲ ಎಂದರು.

  2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿಯ ತಳಪಾಯವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಕೇರಳಕ್ಕೆ ಭೇಟಿ ನೀಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಕ್ಷದ ಮುಖಂಡರನ್ನು ಹಾಗೂ ಆರೆಸ್ಸೆಸ್ ಮುಖಂಡರನ್ನು ಭೇಟಿಮಾಡಿ ವಿಸ್ತೃತ ಮಾತುಕತೆ ನಡೆಸಿದರು.

 ದಲಿತ ಮುಖಂಡ ಮತ್ತು ಸಮಾಜ ಸುಧಾರಕ ಅಯ್ಯನ್‌ಕಾಳಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾ ತಮ್ಮ ದ್ವಿತೀಯ ಹಂತದ ಕೇರಳ ಯಾತ್ರೆಗೆ ಚಾಲನೆ ನೀಡಿದರು. ಕೇರಳದಲ್ಲಿ ಪಕ್ಷಕ್ಕೊಂದು ಸುಭದ್ರ ನೆಲೆ ರೂಪಿಸುವ ಆಶಯದಿಂದ ದಲಿತರು ಮತ್ತು ಮುಸ್ಲಿಮ್ ಸಮುದಾಯದ ವಿಶ್ವಾಸ ಗಳಿಸಿಕೊಳ್ಳುವ ಉದ್ದೇಶ ಅಮಿತ್ ಶಾ ಅವರದ್ದಾಗಿದೆ.

   ಶುಕ್ರವಾರ ವಿವಿಧ ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದ ಶಾ, ರಾಜ್ಯದ ಜನಸಂಖ್ಯೆಯ ಶೇ.20ರಷ್ಟಿರುವ ಕ್ರಿಶ್ಚಿಯನ್ ಸಮುದಾಯದವರನ್ನು ಓಲೈಸುವ ಪ್ರಯತ್ನ ಮುಂದುವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News