ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಕಾಲಾವಕಾಶ ಬೇಕಿದೆ: ರಾಜ್‌ನಾಥ್

Update: 2017-06-03 14:14 GMT

ಹೊಸದಿಲ್ಲಿ, ಜೂ.3: ಏಳು ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎನ್‌ಡಿಎ ಸರಕಾರವು ಶ್ರಮಿಸುತ್ತಿದೆಯೆಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಶನಿವಾರ ತಿಳಿಸಿದ್ದು, ಕಣಿವೆ ರಾಜ್ಯದಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವುದಾಗಿ ಘೋಷಿಸಿದ್ದಾರೆ.

ಕೇಂದ್ರದ ಎನ್‌ಡಿಎ ಸರಕಾರ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತನ್ನ ಸಚಿವಾಲಯದ ಸಾಧನೆಗಳನ್ನು ವಿವರಿಸಲು ಹೊಸದಿಲ್ಲಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

‘‘ಕಾಶ್ಮೀರ ಸಮಸ್ಯೆಯು 1947ನೇ ಇಸವಿಯಷ್ಟು ತುಂಬಾ ಹಳೆಯದಾದ ವಿವಾದವಾಗಿದೆ. ಇದನ್ನು ಬೆರಳೆಣಿಕೆಯ ಸಮಯದಲ್ಲಿ ಇತ್ಯರ್ಥಪಡಿಸಲಾಗದು’’ ಎಂದವರು ಹೇಳಿದರು.

ಕಾಶ್ಮೀರ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರ ಮಿಲಿಟರಿ ಅಥವಾ ರಾಜಕೀಯ ಸ್ವರೂಪದ್ದಾಗಿರುವುದೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಸಚಿವರು ಅದೊಂದು ಸಮಗ್ರ ಪರಿಹಾರವಾಗಲಿದೆ ಎಂದರು. ಕಾಶ್ಮೀರಿ ಪ್ರತ್ಯೇಕವಾದಿಗಳ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಎಲ್ಲಾ ಸಮಸ್ಯೆಗೂ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬಹುದೆಂದು ರಾಜ್‌ನಾಥ್ ಪ್ರತಿಪಾದಿಸಿದರು. ಕಾಶ್ಮೀರದಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಸೃಷ್ಟಿಸುತಿದೆಯಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಶೀಘ್ರದಲ್ಲೇ ಕಾಶ್ಮೀರ ಕಣಿವೆಯಿಂದ ಭಯೋತ್ಪಾದನೆಯ ಮೂಲೋತ್ಪಾಟನೆಯಾಗಲಿದೆ ಎಂದರು.

  ಕಾಶ್ಮೀರಿ ಯುವಜನರ ಕೈಯಲ್ಲಿ ಕಲ್ಲುಗಳನ್ನು ಕಾಣಲು ನಾವು ಬಯಸುವುದಿಲ್ಲ. ಅವರ ಉಜ್ವಲ ಭವಿಷ್ಯಕ್ಕೆ ಅಡ್ಡಿಯಾಗುವ ಯಾವುದೇ ಕಲ್ಲನ್ನು ತೆಗೆದುಹಾಕಲು ನಾವು ಬಯಸಿದ್ದೇವೆ ಎಂದರು.

ಮಾನವಗುರಾಣಿ: ನುಣುಚಿಕೊಂಡ ರಾಜ್‌ನಾಥ್

  ಕಾಶ್ಮೀರದಲ್ಲಿ ಯುವಕನೊಬ್ಪನನ್ನು ಸೇನೆಯ ವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದು ಸರಿಯೇ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ರಾಜ್‌ನಾಥ್ ಸಿಂಗ್. ‘ ಕೆಲವು ಉತ್ತರಗಳನ್ನು ಹೌದು ಅಥವಾ ಅಲ್ಲ ಎಂಬ ಪದಗಳಲ್ಲಿ ಉತ್ತರಿಸಿ ಬಿಡಲು ಸಾಧ್ಯವಿಲ್ಲ ’ ಎಂದರು.

 ಶ್ರೀನಗರದಲ್ಲಿ ಕಲ್ಲುಎಸೆಯುವ ಪ್ರತಿಭಟನಕಾರರ ವಿರುದ್ಧ ಮಾನವಗುರಾಣಿಯಾಗಿ ಯುವಕನನ್ನು ಜೀಪಿಗೆ ಕಟ್ಟಿದ್ದ ಸೇನಾಧಿಕಾರಿ ಮೇಜರ್ ಗೊಗೊಯಿ ಅವರನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಬೆಂಬಲಿಸಿರುವ ಬಗ್ಗೆ ಆಗ ಸುದ್ದಿಗಾರರು ನೆನಪಿಸಿದಾಗ, ‘ವೆಂಕಯ್ಯ ವಾಯ್ಡು ಸರಿಯಾದುದನ್ನೇ ಹೇಳಿದ್ದಾರೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News