×
Ad

ಮತಯಂತ್ರ ಹ್ಯಾಕಿಂಗ್: ಚು.ಆಯೋಗದ ಸವಾಲಿಗೆ ಎನ್‌ಸಿಪಿ, ಸಿಪಿಎಂ ನೀರಸ ಪ್ರತಿಕ್ರಿಯೆ

Update: 2017-06-03 20:47 IST

ಹೊಸದಿಲ್ಲಿ,ಜೂ.3: ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆಯೆಂಬ ಆರೋಪಗಳನ್ನು ಸಾಬೀತುಪಡಿಸುವಂತೆ ರಾಜಕೀಯ ಪಕ್ಷಗಳಿಗೆ ಸವಾಲೊಡ್ಡಿ ಚುನಾವಣಾ ಆಯೋಗವು ಶನಿವಾರ ‘‘ಹ್ಯಾಕಥಾನ್’’ ಸ್ಪರ್ಧೆಯನ್ನು ಆಯೋಜಿಸಿತ್ತು. ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆ ವರೆಗೆ ಈ ಕಾರ್ಯಕ್ರಮದಲ್ಲಿ ಎನ್‌ಸಿಪಿ ಹಾಗೂ ಸಿಪಿಎಂ ಪಕ್ಷಗಳು ಮಾತ್ರ ಭಾಗವಹಿಸಿದ್ದವು.

ಸಿಪಿಎಂ ಪ್ರಾತ್ಯಕ್ಷಿತೆಯನ್ನು ವೀಕ್ಷಿಸಿದರೆ, ಎನ್‌ಸಿಪಿ ತಾಂತ್ರಿಕ ಸಮಿತಿ ತಜ್ಞರೊಂದಿಗೆ ಸಂವಾದದಲ್ಲಿ ಪಾಲ್ಗೊಂಡವು. ಆನಂತರ ಎವಿಎಂನ ಕಾರ್ಯನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಯನ್ನು ನೀಡಲಾಯಿತು. ಆದರೆ ಇವೆರಡೂ ಪಕ್ಷಗಳು ಆಯೋಗದ ಸವಾಲನ್ನು ಸ್ವೀಕರಿಸಲಿಲ್ಲ. ಪಂಜಾಬ್, ಉತ್ತರಪ್ರದೇಶ ಹಾಗೂ ಉತ್ತರಾಖಂಡ್‌ಗಳಲ್ಲಿ ವಿಧಾನಸಭಾ ಚುನಾವಣೆಗೆ ಬಳಸಲಾಗಿದ್ದ 14 ಇವಿಎಂಗಳನ್ನು ಸ್ಪರ್ಧೆಗಾಗಿ ತರಲಾಗಿತ್ತು.

   ಇವಿಎಂಗಳನ್ನು ತಿರುಚಬಹುದೆಂಬುದನ್ನು ಸಾಬೀತುಪಡಿಸಿ ತೋರಿಸುವಂತೆ ಹ್ಯಾಕರ್‌ಗಳಿಗೆ ಆಯೋಗವು ನಾಲ್ಕು ತಾಸುಗಳ ಕಾಲಾವಕಾಶ ನೀಡಿತ್ತು. ಮತಯಂತ್ರವನ್ನು ತಿರುಚುವ ವಿರುದ್ಧ ತಂತ್ರಜ್ಞಾನವನ್ನು ಮತಯಂತ್ರದಲ್ಲಿ ಅಳವಡಿಸಲಾಗಿದೆ. ಒಂದು ವೇಳೆ ಮತಯಂತ್ರವನ್ನು ತಿರುಚುವಾಗ ಅದು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದಲ್ಲಿ, ಸ್ಪರ್ಧಿಯು ವಿಫಲಗೊಂಡನೆಂದೇ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿತ್ತು.

ಚುನಾವಣಾ ಆಯೋಗವು ಇಂದು ಆಯೋಜಿಸಿದ ಪಂಥದಲ್ಲಿ ಪಾಲ್ಗೊಳ್ಳುವವರು ಮತಯಂತ್ರದ ಸರ್ಕ್ಯುಟ್, ಚಿಪ್ ಹಾಗೂ ಮದರ್‌ಬೋರ್ಡ್‌ನ್ನು ಪರಿಶೀಲಿಸಬಹುದು, ಆದರೆ ಅದರ ಯಾವುದೇ ಭಾಗವನ್ನು ತೆಗೆದುಹಾಕಬಾರದೆಂಬ ಶರತ್ತನ್ನು ವಿಧಿಸಿತ್ತು.

 ಮತಯಂತ್ರ ತಿರುಚಲು ಸಾಧ್ಯವಿದೆಯೆಂದು ಬಲವಾಗಿ ವಾದಿಸುತ್ತಿರುವ ಆಮ್ ಆದ್ಮಿ ಪಕ್ಷವು ಆನಂತರ ಹೇಳಿಕೆ.ಯೊಂದನ್ನು ನೀಡಿ, ಆಯೋಗದ ಸವಾಲು ವಿಫಲವಾಗಿದೆಯೆಂದು ಹೇಳಿದೆ

   ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆಯೆಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮತಯಂತ್ರಗಳ ಬಗ್ಗೆ ಜನರ ವಿಶ್ವಾಸ ಕ್ಷೀಣಿಸುತ್ತಿದೆಯೆಂಬ ಹಲವು ರಾಜಕೀಯ ಪಕ್ಷಗಳು ಟೀಕಿಸಿದ ಹಿನ್ನೆಲೆಯಲ್ಲಿ ಚುಆವಣಾ ಆಯೋಗಈ ಸ್ಪರ್ಧೆಯನ್ನು ಆಯೋಜಿಸಿತ್ತು.

   ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಮಾಡಲು ಮತಯಂತ್ರಗಳನ್ನು ತಿರುಚಲಾಗಿದೆಯೆಂದು ಬಿಎಸ್‌ಪಿ ಹಾಗೂ ಎಎಪಿ ಆಪಾದಿಸಿದ್ದವು. ಆನಂತರ ಇತರ ಕೆಲವು ರಾಜಕೀಯ ಪಕ್ಷಗಳು ಕೂಡಾ ಮತಯಂತ್ರದ ವಿರುದ್ಧ ಅಪಸ್ವರವೆತ್ತಿದ್ದವು ಹಾಗೂ ಚುನಾವಣಾ ಆಯೋಗವು ಮತ್ತೆ ಮತಪತ್ರಗಳ ಮೂಲಕ ಚುನಾವಣೆಯನ್ನು ನಡೆಸಬೇಎಂದು ಅವು ಆಗ್ರಹಿಸಿದ್ದವು.

 ಆದರೆ ಅದನ್ನು ನಿರಾಕರಿಸಿದ ಆಯೋಗವು, ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆಯೆಂಬುದನ್ನು ಸಾಬೀತುಪಡಿಸುವಂತೆ ರಾಜಕೀಯ ಪಕ್ಷಗಳಿಗೆ ಸವಾಲೊಡ್ಡಿತ್ತು. ಆಯೋಗವು ಏಳು ರಾಷ್ಟ್ರೀಯ ಹಾಗೂ 49 ರಾಜಕೀಯ ಪಕ್ಷಗಳನ್ನು ಸ್ಪರ್ಧೆಗೆ ಆಹ್ವಾನಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News