ಮಾಡದ ಕೊಲೆಗೆ 22 ವರ್ಷ ಜೈಲಿನಲ್ಲಿ ಕೊಳೆತ ಹುಸೈನ್ ಈಗ ಬಂಧಮುಕ್ತ
ಹೊಸದಿಲ್ಲಿ, ಜೂ.3: ತಾನು ಮಾಡದ ತಪ್ಪಿಗಾಗಿ 22 ವರ್ಷಗಳನ್ನು ಜೈಲಿನಲ್ಲಿ ಕಳೆದ ರಾಜಾ ಹುಸೈನ್ ಬಂಧಮುಕ್ತರಾಗಿ ಮನೆಗೆ ಹಿಂದಿರುಗಿದಾಗ ಅವರಿಗೆ 46 ವರ್ಷಗಳಾಗಿತ್ತು. ರಾಜಾ ಹುಸೈನ್ ರನ್ನು ಪೊಲೀಸರು ಬಂಧಿಸಿದಾಗ ಅವರಿಗೆ ಒಂದು ವರ್ಷದ ಮಗುವಿತ್ತು. ಹುಸೈನ್ ಹಾಗೂ ಪತ್ನಿ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದರು.
“ನೀವು ಭಾಗಿಯಾಗದ ಅಪರಾಧ ಕೃತ್ಯವೊಂದಕ್ಕೆ ಜೈಲುಶಿಕ್ಷೆ ಅನುಭವಿಸುವುದಕ್ಕಿಂತ ಘೋರಶಿಕ್ಷೆ ಮತ್ತೊಂದಿಲ್ಲ” ಎನ್ನುತ್ತಾರೆ ರಾಜಾ ಹುಸೈನ್.
1994ರಲ್ಲಿ ನಡೆದ ಹಿಂದೂ ಮುನ್ನಣಿ ಅಧ್ಯಕ್ಷ ರಾಜಗೋಪಾಲನ್ ಕೊಲೆ ಪ್ರಕರಣದಲ್ಲಿ ರಾಜಾ ಹುಸೈನ್ ಸಹಿತ ಆರು ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಮೇಲೆ ಭಯೋತ್ಪಾದನಾ ಚಟುವಟಿಕಾ ನಿಯಂತ್ರಣ ಕಾಯ್ದೆ (ಟಾಡಾ) ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 74 ಡಾಕ್ಯುಮೆಂಟರಿ ಪುರಾವೆಗಳು, 13 ವಸ್ತು ಪುರಾವೆಗಳು ಹಾಗೂ 32 ಪ್ರಾಸಿಕ್ಯೂಶನ್ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ತಿರುನಲ್ವೇಲಿಯ ಟಾಡಾ ಕೋರ್ಟ್ ಎಲ್ಲಾ ಬಂಧಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ತನ್ನ ಜೀವನದ ಎಲ್ಲಾ ಕನಸುಗಳು ಸತ್ತೇ ಹೋಯಿತು ಎಂದು ಭಾವಿಸಿದ್ದ ಹುಸೈನ್ ರಿಗೆ ಸುಮಾರು 22 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಬದುಕುವ ಅವಕಾಶವನ್ನು ಮತ್ತೊಮ್ಮೆ ಕಲ್ಪಿಸಿತು. ಟಾಡಾ ಕಾಯ್ದೆಯಡಿ ನಡೆದ ಪ್ರಕರಣದ ವಿಚಾರಣೆ ಸಂಪೂರ್ಣವಾಗಿ ದುರ್ಬಲವಾಗಿದೆ. ಇಷ್ಟೇ ಅಲ್ಲದೆ ಕೋರ್ಟ್ ನೀಡಿದ್ದ ಆದೇಶವೂ ಕಾನೂನುಬಾಹಿರವಾಗಿದೆ ಎಂದು ಜ.ಪಿನಾಕಿ ಚಂದ್ರ ಘೋಸ್ ಹಾಗೂ ಜ.ಆರ್.ಎಫ್.ನಾರಿಮನ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿತು.
ಆದರೆ 22 ವರ್ಷಗಳ ನಂತರ ಸಿಕ್ಕ ನ್ಯಾಯದ ಹೊರತಾಗಿಯೂ ಹುಸೈನ್ ತಮ್ಮ ಯೌವನದ ವರ್ಷಗಳನ್ನು ತಾವು ಮಾಡದ ತಪ್ಪಿಗಾಗಿ ಕಳೆದುಕೊಂಡಿದ್ದಾರೆ. ತನ್ನ ಪತ್ನಿ, ಮಕ್ಕಳು, ಕುಟುಂಬಸ್ಥರೊಂದಿಗೆ ಕಳೆಯಬೇಕಾಗಿದ್ದ ಕ್ಷಣಗಳನ್ನು ಜೈಲಿನ ಗೋಡೆಗಳನ್ನು ನೋಡುತ್ತಾ ಕಳೆದಿದ್ದಾರೆ. ತನ್ನ ಮಗಳ ಬಾಲ್ಯ, ಆಕೆಯ ಮೊದಲ ಹೆಜ್ಜೆಗಳು, ನಂತರದ ದಿನಗಳು, ಮದುವೆಯಾದ ಕ್ಷಣ, ಮಗನ ಶಾಲಾ ದಿನಗಳು, ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಉದ್ಯೋಗ ಗಿಟ್ಟಿಸಿಕೊಂಡ ದಿನಗಳನ್ನೆಲ್ಲಾ ಹುಸೈನ್ ಕಂಡೇ ಇಲ್ಲ.
“ಕಳೆದ 22 ವರ್ಷಗಳಿಂದ ನಾನು ಪ್ರತಿದಿನ ರಾತ್ರಿ ಅಲ್ಲಾಹನೊಡನೆ ಪ್ರಾರ್ಥಿಸುತ್ತಿದ್ದೆ, ಆತನಾದರೂ ನನ್ನ ಧ್ವನಿಯನ್ನು ಆಲಿಸಬಹುದು ಎಂಬ ನಂಬಿಕೆಯಿತ್ತು. ಜೈಲಿನಲ್ಲಿ ನಾನು ಒಬ್ಬಂಟಿಗನಾಗಿದ್ದೆ. ಒಬ್ಬಂಟಿಯಾಗಿರುವುದು ಎಷ್ಟು ಕಠಿಣವೆಂದು ನಿಮಗೆ ಗೊತ್ತೇ? ಪ್ರಾಣಿಯಂತೆ ನಡೆಸಿಕೊಳ್ಳುವಾಗ ಹೇಗನಿಸುತ್ತದೆ ಎಂದು ನಿಮಗೆ ಗೊತ್ತೇ?” ಎಂದು ಹೇಳುವ ಹುಸೈನ್ ಒಂದು ನಿಮಿಷ ಗದ್ಗದಿತರಾಗುತ್ತಾರೆ.
“ನನ್ನ ಏಕೈಕ ಅಪರಾಧವೆಂದರೆ ಮುಸ್ಲಿಮನಾಗಿ ಬಡವರ ಕುಟುಂಬದಲ್ಲಿ ಜನಿಸಿರುವುದು. ಘೋರ ಅಪರಾಧಗಳಲ್ಲಿ ಭಾಗಿಯಾದವರು ಸುಖವಾಗಿ ನಿದ್ರಿಸುತ್ತಿದ್ದಾರೆ. ಆದರೆ ನಾನು ತಳಮಳದಿಂದ ಎಚ್ಚರದಿಂದಿರಬೇಕಾಗುತ್ತದೆ” ಎನ್ನುತ್ತಾರೆ ಹುಸೈನ್.
ಕುಟುಂಬಸ್ಥರಿಂದಲೂ ದೂರ: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಸೈನ್ ಬಂಧನವಾದ ನಂತರ ಪೊಲೀಸರು ನಮ್ಮನ್ನೂ ಗುರಿಯಾಗಿಸಬಹುದು ಎನ್ನುವ ಭಯದಿಂದ ಕುಟುಂಬಸ್ಥರು ಹುಸೈನ್ ಮನೆಯವರಿಂದ ದೂರವಾಗತೊಡಗಿದರು. ಹುಸೈನ್ ಜೈಲು ಕಂಬಿಯ ಹಿಂದೆ ಜೀವನ ಕಳೆಯುತ್ತಿರುವ ಸಂದರ್ಭ ಅವರ ಸಹೋದರಿ ನೆರವಿಗೆ ಧಾವಿಸಿದರು. ಹುಸೈನ್ ರ ಪುತ್ರ ಇಂಜಿನಿಯರಿಂಗ್ ಮುಗಿಸಲು ಹಾಗೂ ಪುತ್ರಿಯ ವಿವಾಹ ನೆರವೇರಿಸಲು ಆಕೆ ನೆರವಾದರು.
“ನನ್ನ ಸಹೋದರಿಯ ಪ್ರೀತಿಯಿಂದ ನನ್ನ ಕುಟುಂಬ ಉಳಿದಿದೆ. 46 ವರ್ಷದ ವೇಳೆಗೆ ಹಲವರು ಜೀವನದಲ್ಲಿ ನೆಲೆ ಕಂಡಿರುತ್ತಾರೆ. ಆದರೆ ನಾನು ಇನ್ನಷ್ಟೇ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ” ಎಂದು ಹುಸಿನಗುವಿನ ಮೂಲಕ ಅಳುವನ್ನು ಮರೆಸಲು ಯತ್ನಿಸುವ ಹುಸೈನ್ ಹೇಳುತ್ತಾರೆ.