ಸುಳ್ಳುಗಳ ಆವರಣ ಹರಿದು....

Update: 2017-06-10 18:23 GMT

ಜನಾಂಗೀಯವಾದಿ, ಮತೀಯವಾದಿ ಸಿದ್ಧಾಂತಗಳು ಗತದ ವೈಭವೀಕರಣದೊಂದಿಗೆ ಕಾಲ್ಪನಿಕ ಶತ್ರುಗಳನ್ನು ಬೇಡುತ್ತದೆ ಮತ್ತು ತನ್ನ ಸುಳ್ಳುಗಳ ಮೂಲಕವೇ ಅವುಗಳನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ಈಗ ಜಾರಿಗೆ ಬರುತ್ತಿರುವ ಹರಡುತ್ತಿರುವ ಹಿಂದುತ್ವದ ಹುಸಿ ರಾಷ್ಟ್ರೀಯತೆ ನಿಂತಿರುವುದು ಇಂತಹ ಸುಳ್ಳುಗಳ ಮೂಲಕವೇ ಆಗಿದೆ. ಆದುದರಿಂದ ಇತಿಹಾಸದ ಈ ತಪ್ಪು ಚಿತ್ರಣವನ್ನು ಬದಲಾಯಿಸಿ ನಮ್ಮ ಬಹುಸಂಸ್ಕೃತಿಯ ಪರಂಪರೆಯನ್ನು ಉಳಿಸಿಕೊಳ್ಳುವುದು ಇಂದಿನ ತುರ್ತು ಆವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ರಿಚರ್ಡ್ ಎಂ. ಈಟನ್ ಅವರ ‘ಮಂದಿರ ಅಪವಿತ್ರೀಕರಣ ಮತ್ತು ಇಂಡೋ ಮುಸ್ಲಿಮ್ ಸಾಮ್ರಾಜ್ಯಗಳು’ ಕೃತಿ ಅತ್ಯಂತ ಮಹತ್ವದ್ದಾಗಿದೆ.

ಈ ಕೃತಿ ಅರಿರೆನಾ ವಿಶ್ವವಿದ್ಯಾನಿಲಯದ ಪ್ರೊ. ರಿಚರ್ಡ್ ಎಂ. ಈಟನ್ ಅವರು ಆಕ್ಸ್‌ಫರ್ಡ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡಿಸ್‌ನಲ್ಲಿ ನೀಡಿದ ಉಪನ್ಯಾಸವೊಂದರ ಪೂರ್ಣಪಾಠವಾಗಿದೆ. ಮಂದಿರ ವಿಧ್ವಂಸ ವಿಷಯವನ್ನು ಎತ್ತಿಕೊಂಡು ಅದನ್ನು ಚಾರಿತ್ರಿಕ ಪುರಾವೆಗಳ ಆಧಾರದಲ್ಲಿ ವಸ್ತುನಿಷ್ಠವಾಗಿ, ಸವಿವರವಾಗಿ ಈ ಕೃತಿಯಲ್ಲಿ ಅವರು ವಿಶ್ಲೇಷಿಸಿದ್ದಾರೆ. ಅವರ ಈ ಪ್ರಬಂಧ ಮಂದಿರ ಅಪವಿತ್ರೀಕರಣದ ಹಿನ್ನೆಲೆ ಮತ್ತು ಕಾರಣಗಳನ್ನು ದೃಷ್ಟಾಂತ ಸಮೇತ ನೀಡುತ್ತದೆ. ಅಷ್ಟೇ ಅಲ್ಲ, ಇದು ಕೇವಲ ಮುಸ್ಲಿಮ್ ಅರಸರಿಂದಷ್ಟೇ ನಡೆದಿರುವುದಲ್ಲ, ಭಾರತದ ರಾಜರಲ್ಲಿಯೂ ಮಂದಿರ ಧ್ವಂಸ ಮಾಮೂಲಿಯಾಗಿದ್ದವು ಎಂಬುದನ್ನು ಈಟನ್ ಸೋದಾಹರಣವಾಗಿ ವಿವರಿಸಿದ್ದಾರೆ.

ಬಾಬರಿ ಮಸೀದಿಯನ್ನು ಮುಂದಿಟ್ಟುಕೊಂಡು ಹೇಗೆ ಹಿಂದಿನ ಭಾರತದಲ್ಲಿ ಮಂದಿರ ಅಪವಿತ್ರೀಕರಣವೂ ಒಂದು ರಾಜಕೀಯ ಭಾಗವಾಗಿತ್ತು ಎನ್ನುವುದನ್ನು ಅವರು ವಿವಿಧ ಅಧ್ಯಾಯಗಳಲ್ಲಿ ಚರ್ಚಿಸುತ್ತಾರೆ. ಭಾರತದಲ್ಲಿ ಕ್ರಿ. ಶ. 13ನೆ ಶತಮಾನಕ್ಕಿಂತಲೂ ಸಾಕಷ್ಟು ಹಿಂದೆಯೇ ರೂಢಿಯಲ್ಲಿದ್ದ ನಡವಳಿಕೆಗಳು ಆನಂತರವೂ ಮುಂದುವರಿದಿದೆ ಎಂದು ಈಟನ್ ಹೇಳುತ್ತಾರೆ. ಬ್ರಿಟಿಷ್ ವಸಾಹತುಶಾಹಿ ಇತಿಹಾಸ ಕಥನಗಳು ಹೇಗೆ ಕೆಲವೊಮ್ಮೆ ಹಿಂದೂ ರಾಷ್ಟ್ರೀಯವಾದಿಗಳಿಗೆ ಪೂರಕವಾಗಿದೆ ಎನ್ನುವ ಅಂಶವನ್ನೂ ಅವರು ಎತ್ತಿ ತೋರಿಸುತ್ತಾರೆ. ಈ ಕೃತಿಯನ್ನು ಸುರೇಶ್ ಭಟ್ ಬಾಕ್ರಬೈಲ್ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಕೃತಿಯ ಮುಖಬೆಲೆ 60 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News