ಸಸಿ ನೆಡುವ ಹೆಸರಲ್ಲಿ ಭ್ರಷ್ಟಾಚಾರ?

Update: 2017-06-16 18:01 GMT

ಮಾನ್ಯರೆ,

ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು, ವನಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಸಿಗುತ್ತದೆ. ಜೊತೆಗೆ ಸಸಿಗಳನ್ನು ವಿತರಿಸಲಾಗುತ್ತದೆ ಹಾಗೂ ನೆಡಲಾಗುತ್ತದೆ. ಬಿಬಿಎಂಪಿಯ ಅರಣ್ಯ ಘಟಕ ಕೂಡಾ ಇದೇ ಕೆಲಸ ಮಾಡಿದೆ. ಸಸಿಗಳನ್ನು ‘ಮರ’ ಮಾಡುವುದಕ್ಕೆ ಹಾಗೂ ಇನ್ನಿತರ ಕೆಲಸಗಳಿಗಾಗಿ ಬಿಬಿಎಂಪಿ ಒಂದು ವರ್ಷಕ್ಕೆ 20 ಕೋಟಿ ರೂ. ಖರ್ಚು ಮಾಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ.

ಬೆಂಗಳೂರಿನ ವಿವಿಧ ಕಡೆ ಒಟ್ಟು 1.62 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂಬುದು ಬಿಬಿಎಂಪಿಯ ಮಾತು. ಒಂದು ಸಸಿಗೆ 506 ರೂಪಾಯಿಯಂತೆ ಬಿಬಿಎಂಪಿ ಖರ್ಚು ಮಾಡಿದೆಯಂತೆ. ಜೊತೆಗೆ ಸಸಿಗಳ ರಕ್ಷಣೆ, ನೆಡುತೋಪುಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು, ಪ್ರತಿ ಮರ-ಗಿಡಗಳಿಗೆ ಸಂಖ್ಯೆ ನೀಡುವುದಕ್ಕಾಗಿ ಹಾಗೂ ಬೆಳೆಸಿರುವ ಮರ-ಗಿಡಗಳ ಸರ್ವೇ ಮಾಡಲು ಇಪ್ಪತ್ತು ಕೋಟಿ ರೂ. ಖರ್ಚಾಗಿದೆ ಎಂಬ ವರದಿಯಲ್ಲಿರುವ ಅಂಶ ಅನುಮಾನ ಮೂಡಿಸಿದೆ. ಬೆಂಗಳೂರಿನೆಲ್ಲೆಡೆ ಕಣ್ಣು ಹಾಯಿಸಿದರೂ ಹೊಸದಾಗಿ ಲಕ್ಷ- ಲಕ್ಷ ಗಿಡ ನೆಟ್ಟದ್ದು ಕಾಣುತ್ತಿಲ್ಲ. ಹಾಗಾದರೆ ಗಿಡಗಳ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆಯೇ? ಅಲ್ಲದೆ ಕದ್ದು ಮುಚ್ಚಿ ಅರಣ್ಯ ಘಟಕದ ಅಧಿಕಾರಿಗಳೇ ಬೆಲೆಬಾಳುವ ಗಿಡ
ಗಳನ್ನು ಮಾರುತ್ತಿದ್ದಾರೆ ಎಂಬ ಆರೋಪ ಕೂಡಾ ಇದೆ. ಕೂಡಲೇ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಾದ ಅಗತ್ಯವಿದೆ.

Similar News