ಮೆಟ್ರೋ ನಿಲ್ದಾಣಗಳಿಗೆ ಪ್ರಮುಖರ ಹೆಸರುಗಳ ನಾಮಕರಣವಾಗಲಿ

Update: 2017-06-20 18:08 GMT

ಮಾನ್ಯರೆ,

ಈಗಾಗಲೇ ನಾಯಂಡಹಳ್ಳಿಯಿಂದ ಬೈಯಪ್ಪನ ಹಳ್ಳಿಯತನಕ ಸಂಚರಿಸುತ್ತಿರುವ ಮೆಟ್ರೋ ರೈಲಿನ ಅನೇಕ ನಿಲ್ದಾಣಗಳಿಗೆ ಬೇರೆ, ಬೇರೆ ಹೆಸರುಗಳನ್ನಿತ್ತು ನಾಮಕರಣ ಮಾಡಲಾಗಿದೆ. ಮೆಟ್ರೋ ರೈಲು ಇನ್ನು ನ್ಯಾಷನಲ್ ಕಾಲೇಜಿನಿಂದ ಕೋಣನಕುಂಟೆ ಕ್ರಾಸ್‌ವರೆಗೂ ಸಂಚರಿಸುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಬರುವ ಪ್ರಮುಖ ನಿಲ್ದಾಣಗಳಿಗೆ ಇಲ್ಲಿನ ಪ್ರಮುಖರ ಹೆಸರುಗಳನ್ನು ನಾಮಕರಣ ಮಾಡಬೇಕಾಗಿದೆ.

1.ವಿ.ವಿ.ಪುರಂ ಬಳಿ ಇರುವ ಮೆಟ್ರೋ ರೈಲು ನಿಲ್ದಾಣಕ್ಕೆ ನಮ್ಮ ಭಾಗದ ಲೋಕಸಭಾ ಸದಸ್ಯರಾಗಿದ್ದ ಆರ್ಥಿಕ ತಜ, ಅತ್ಯಂತ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಪ್ರೊ. ವೆಂಕಟಗಿರಿಗೌಡರ ಹೆಸರನ್ನು ನಾಮಕರಣ ಮಾಡಬೇಕು. 2. ನ್ಯಾಷನಲ್ ಕಾಲೇಜ್ ಬಳಿಯ ನಿಲ್ದಾಣಕ್ಕೆ ಶಿಕ್ಷಣ ತಜ್ಞ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ನ್ಯಾಷನಲ್ ಕಾಲೇಜಿನ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಬೇಕು.
3.ಲಾಲ್‌ಬಾಗ್ ವೆಸ್ಟ್‌ಗೇಟ್ ಬಳಿ ಬರುವ ನಿಲ್ದಾಣಕ್ಕೆ ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ ಡಾ. ಮರಿಗೌಡರ ಹೆಸರನ್ನು ನಾಮಕರಣ ಮಾಡಬೇಕು.
4. ಸೌತ್‌ಎಂಡ್ ಸರ್ಕಲ್‌ನ ನಿಲ್ದಾಣಕ್ಕೆ ಕರ್ನಾಟಕದ ಹೆಸರಾಂತ ಲೇಖಕಿ ಮತ್ತು ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲರಾಗಿ ದುಡಿದ ಶೀಲಾಮಂಗಳರವರ ಹೆಸರನ್ನು ನಾಮಕರಣ ಮಾಡಬೇಕು.
5. ಜಯನಗರದ ಮೆಟ್ರೋ ನಿಲ್ದಾಣಕ್ಕೆ ನಿಘಂಟು ತಜ್ಞ, 103 ವರ್ಷಗಳ ಹಿರಿಯರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಹೆಸರನ್ನು ನಾಮಕರಣ ಮಾಡಬೇಕು.
ಮೇಲಿನ ವ್ಯಕ್ತಿಗಳ ಹೆಸರುಗಳನ್ನು ಮೆಟ್ರೋ ರೈಲು ನಿಲ್ದಾಣಗಳಿಗೆ ನಾಮಕರಣ ಮಾಡುವುದರಿಂದ ಇವರ ಸೇವೆಯನ್ನು ಸ್ಮರಿಸಿಕೊಂಡಂತಾಗುತ್ತದೆ ಮತ್ತು ಮುಂದಿನ ಜನಾಂಗಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಈ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟಂತಾಗುತ್ತದೆ.

Similar News