×
Ad

ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ದುರಂತ: ಐವರು ಸಾವು

Update: 2017-06-25 18:55 IST

ಶ್ರೀನಗರ, ಜೂ.25: ಜಮ್ಮು-ಕಾಶ್ಮೀರದ ವಿಶ್ವ ವಿಖ್ಯಾತ ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ಗೊಂಡೊಲಾ ಕಾರ್ ಕ್ಯಾಬಿನ್‌ನ ಕೇಬಲ್‌ವೊಂದು ತುಂಡಾಗಿ ನೂರಾರು ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಕಾರಿನೊಳಗಿದ್ದ ನಾಲ್ವರು ಪ್ರವಾಸಿಗರು ಹಾಗೂ ಓರ್ವ ಸ್ಥಳೀಯ ವ್ಯಕ್ತಿ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.

ಬಲವಾಗಿ ಬೀಸಿದ ಗಾಳಿಯಿಂದಾಗಿ ಮರವೊಂದು ಕೇಬಲ್ ಕಾರ್‌ನ ಮೇಲೆ ಬಿದ್ದ ಕಾರಣ ತಂತಿ ತುಂಡಾಗಿದ್ದು, ಘಟನೆಯಲ್ಲಿ ಕಾರೊಳಗೆ ಇದ್ದ ದಿಲ್ಲಿ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಗೊಂಡೊಲಾ ಕೇಬಲ್ ಕಾರ್ ಯೋಜನೆಯ ಇತರ ಕಾರ್‌ಗಳಲ್ಲಿ ಸಿಲುಕಿಹಾಕಿಕೊಂಡ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

 ಎರಡು ಹಂತದ ಗುಲ್ಮಾರ್ಗ್ ಕಾರ್ ಕೇಬಲ್ ಲಿಫ್ಟ್ ಪ್ರವಾಸಿಗರನ್ನು ಸಮುದ್ರಮಟ್ಟದಿಂದ 13,780 ಅಡಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದು ವಿಶ್ವದ ಎರಡನೆ ಅತ್ಯಂತ ದೊಡ್ಡ ಕೇಬಲ್ ಕಾರ್ ಯೋಜನೆಯಾಗಿದ್ದು, ಕಾರ್ ಕ್ಯಾಬಿನ್‌ನಲ್ಲಿ ಪ್ರತಿ ಗಂಟೆಗೆ 600 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿದೆ.

ಕಾಶ್ಮೀರದಲ್ಲಿ ಗುಲ್ಮಾರ್ಗ್ ಪ್ರದೇಶ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News