ಹೋಮ್ ಗಾರ್ಡ್‌ಗಳಿಗೆ ‘ನೀಲ್ ಡೌನ್’ ಶಿಕ್ಷೆ

Update: 2017-06-29 09:35 GMT

ಭುಬನೇಶ್ವರ್, ಜೂ. 29: ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದ ವಿಚಿತ್ರ ವಿದ್ಯಮಾನವೊಂದರಲ್ಲಿ ಮಹಿಳೆಯೊಬ್ಬಳು ಸೇರಿದಂತೆ ನಾಲ್ಕು ಮಂದಿ ಗೃಹ ರಕ್ಷಕ ದಳ ಸಿಬ್ಬಂದಿಗೆ (ಹೋಮ್ ಗಾರ್ಡ್ಸ್) ಮೊಣಕಾಲೂರಿ ಕೈಗಳನ್ನು ಮೇಲೆತ್ತಿ ನಿಲ್ಲುವ ಶಿಕ್ಷೆಯನ್ನು ವಿಧಿಸಲಾಗಿದೆ.

ಅಷ್ಟಕ್ಕೂ ಅವರು ಮಾಡಿದ ತಪ್ಪೇನು ಗೊತ್ತೇ ? ಅವರು ತಮ್ಮ ಸಮವಸ್ತ್ರವನ್ನು ಸರಿಯಾಗಿ ಧರಿಸಿಲ್ಲವಂತೆ. ಈ ತಪ್ಪಿಗಾಗಿ ಅವರಿಗೆ ಈ ಶಿಕ್ಷೆಯನ್ನು ಮೀಸಲು ಪಡೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ನೀಡಿದ್ದಾರೆ. ಈ ಗೃಹ ರಕ್ಷಕ ದಳ ಸಿಬ್ಬಂದಿಗಳು ನೀಲ್ ಡೌನ್ ಪೊಸಿಶನ್ ನಲ್ಲಿ ಎರಡು ನಿಮಿಷ ನಿಂತಿದ್ದರೆಂದು ವರದಿಗಳು ತಿಳಿಸಿವೆ.

ಈ ಘಟನೆ ಜೂನ್ 26ರಂದು ನಡೆದಿದ್ದು, ಎಲ್ಲಾ ನಾಲ್ಕು ಮಂದಿ ಹೋಮ್ ಗಾರ್ಡ್‌ಗಳು ರಥ ಯಾತ್ರೆಯ ನಿಮಿತ್ತ ವಿಶೇಷ ಕರ್ತವ್ಯದಲ್ಲಿದ್ದರು. ಅವರಿಗೆ ನೀಡಲಾದ ಶಿಕ್ಷೆಯನ್ನು ಸಮರ್ಥಿಸಿರುವ ಹಿರಿಯ ಅಧಿಕಾರಿಯೊಬ್ಬರು ಇದೊಂದು ಶಿಸ್ತು ಕ್ರಮ ಎಂದಿದ್ದಾರೆ.

ಈ ಘಟನೆ ಸಂಬಂಧ ಮಯೂರ್ ಭಂಜ್ ಎಸ್‌ಪಿ ಹಾಗೂ ಗೃಹ ರಕ್ಷಕ ದಳ ಕಮಾಂಡೆಂಟ್ ಅವರಿಂದ ಡಿಜಿ ಬಿನಯ ಬೆಹ್ರಾ ಅವರು ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News