ವರ್ಗಾವಣೆ ಮಾಡಿದ ಆದಿತ್ಯನಾಥ್ ಸರಕಾರಕ್ಕೆ ದಿಟ್ಟ ಪ್ರತಿಕ್ರಿಯೆ ನೀಡಿದ ಮಹಿಳಾ ಪೊಲೀಸ್ ಅಧಿಕಾರಿ
ಉತ್ತರ ಪ್ರದೇಶ, ಜು.2: ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ಸರಕಾರಿ ಕರ್ತವ್ಯ ಪಾಲನೆಗೆ ಅಡ್ಡಿಪಡಿಸಿದ್ದಕ್ಕಾಗಿ ಐವರು ಬಿಜೆಪಿ ನಾಯಕರನ್ನು ಜೈಲಿಗಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಬಿಜೆಪಿ ನಾಯಕರನ್ನು ನಡುರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದ ಶ್ರೇಷ್ಟ ಠಾಕೂರ್ ಅವರ ಬಗ್ಗೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈ ನಡುವೆ ಇಂದು ಉತ್ತರ ಪ್ರದೇಶ ಸರಕಾರ ಅವರನ್ನು ವರ್ಗಾವಣೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಷ್ಟ, “ಬಹರೈಚ್ ಗೆ ವರ್ಗಾವಣೆ ಮಾಡಲಾಗಿದೆ. ಇದು ನೇಪಾಳ ಗಡಿಭಾಗದಲ್ಲಿದೆ. ಸ್ನೇಹಿತರೇ ಚಿಂತಿಸಬೇಡಿ. ನಾನು ಸಂತೋಷವಾಗಿದ್ದೇನೆ. ನನ್ನ ಒಳ್ಳೆಯ ಕೆಲಸಕ್ಕೆ ಸಿಕ್ಕ ಪ್ರತಿಫಲ ಎಂದು ನಾನು ಇದನ್ನು ಸ್ವೀಕರಿಸುತ್ತೇನೆ”.
"ಬೆಂಕಿಯ ಜ್ವಾಲೆಗೆ ತನ್ನದೇ ಆದ ನೆಲೆಯಿಲ್ಲ. ಅದು ಎಲ್ಲೇ ಹೋಗಲಿ ಬೆಳಕನ್ನು ಹರಡುತ್ತದೆ" ಎಂದು ಅವರು ತನ್ನ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ರೇಷ್ಟ ಅವರ ದಿಟ್ಟ ಪ್ರತಿಕ್ರಿಯೆಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.
ಬಿಜೆಪಿ ನಾಯಕರನ್ನು ಜೈಲಿಗಟ್ಟಿದ್ದ ನಂತರ 11 ಶಾಸಕರು ಹಾಗೂ ಸಂಸದರು ಮುಖ್ಯಮಂತ್ರಿ ಆದಿತ್ಯನಾಥ್ ರೊಂದಿಗೆ ಸಭೆ ನಡೆಸಿದ್ದರು. ಈ ಸಂದರ್ಭ ಠಾಕೂರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ವರ್ಗಾವಣೆ ಅತ್ಯಗತ್ಯ ಎನ್ನುವ ಒತ್ತಾಯ ಸಭೆಯಲ್ಲಿ ವ್ಯಕ್ತವಾಗಿತ್ತು.