ಡೋಕ್‌ಲಾದಲ್ಲಿ ಹೆಚ್ಚುವರಿ ಸೇನಾಪಡೆಗಳ ನಿಯೋಜನೆ

Update: 2017-07-02 14:35 GMT

  ಹೊಸದಿಲ್ಲಿ,ಜು.2: ಚೀನಾದ ಜೊತೆಗಿನ ಗಡಿಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಭಾರತವು ಸಿಕ್ಕಿಂ ಸಮೀಪದ ಡೋಕ್‌ಲಾದಲ್ಲಿ ತನ್ನ ಸೇನಾಪಡೆಗಳನ್ನು ‘ಯುದ್ಧೇತರ ಸ್ಥಿತಿ’ಯಲ್ಲಿ ನಿಯೋಜಿಸಿದೆ.
ಸಿಕ್ಕಿಂ ಸಮೀಪ ಚೀನಾಗೆ ತಾಗಿಕೊಂಡಿರುವ ಗಡಿಯಲ್ಲಿ ಚೀನಿಪಡೆಗಳು ಭಾರತೀಯ ಸೇನೆಯ ಎರಡು ಬಂಕರ್‌ಗಳನ್ನು ನಾಶಪಡಿಸಿದ ಬಳಿಕ ಹಾಗೂ ಚೀನಿ ಸೇನೆಯ ಆಕ್ರಮಣಕಾರಿ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರತವು ಆ ಪ್ರದೇಶದಲ್ಲಿ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆಯೆಂದು ಸೇನಾ ಮೂಲಗಳು ತಿಳಿಸಿವೆ.

ಭಾರತ-ಭೂತಾನ್-ಟಿಬೆಟ್‌ಗೆ ತಾಗಿಕೊಂಡಿರುವ ಚುಂಬಿ ಕಣಿವೆಯ ಪರಿಸರದಲ್ಲಿರುವ ಡೋಕ್ ಲಾದ ಲಾಲ್ಟೆನ್ ಎಂಬಲ್ಲಿ ಭಾರತೀಯ ಸೇನೆಯು 2012ರಲ್ಲಿ ಸ್ಥಾಪಿಸಿದ್ದ ಎರಡು ಬಂಕರ್‌ಗಳನ್ನು ತೆರವುಗೊಳಿಸುವಂತೆ ಚೀನಿ ಸೇನೆಯು ಭಾರತಕ್ಕೆ ಸೂಚಿಸಿತ್ತು.
ಆ ಪ್ರದೇಶದ ಗಡಿಮುಂಚೂಣಿಯಲ್ಲಿ ನಿಯೋಜಿತವಾಗಿದ್ದ ಭಾರತೀಯ ಸೇನಾಪಡೆಗಳು ಚೀನಾ ನೀಡಿರುವ ಎಚ್ಚರಿಕೆಯ ಬಗ್ಗೆ ಪಶ್ಚಿಮಬಂಗಾಳದ ಸುಖ್ನಾದಲ್ಲಿರುವ 33 ಕಾರ್ಪ್ಸ್ ಮುಖ್ಯ ಕಾರ್ಯಾಲಯಕ್ಕೆ ಮಾಹಿತಿ ನೀಡಿತ್ತು.
  ಆದಾಗ್ಯೂ ಜೂನ್ 6ರ ರಾತ್ರಿ ಚೀನಿ ಸೇನೆಯ ಎರಡು ಬುಲ್‌ಡೋಜರ್‌ಗಳು ಎರಡೂ ಬಂಕರ್‌ಗಳನ್ನು ನೆಲಸಮಗೊಳಿಸಿದ್ದವು. ಈ ಪ್ರದೇಶವು ತನಗೆ ಸೇರಿದ್ದಾಗಿದ್ದು ಭಾರತ ಹಾಗೂ ಭೂತಾನ್‌ಗೆ ಅದರ ಮೇಲೆ ಯಾವುದೇ ಹಕ್ಕಿಲ್ಲವೆಂದು ವಾದಿಸಿ ಅದು ಈ ಕಾರ್ಯಾಚರಣೆಯನ್ನು ನಡೆಸಿದೆಯೆಂದು ಮೂಲಗಳು ಹೇಳಿವೆ.

ತದನಂತರ ಭಾರತೀಯ ಪಡೆಗಳು ಚೀನಿ ಯೋಧರು ಈ ಪ್ರದೇಶದ ಮೇಲೆ ಅತಿಕ್ರಮಣ ನಡೆಸುವುದನ್ನು ತಡೆದಿದ್ದರು.
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ಭಾರತವು ಜೂನ್ 8ರಂದು ಅಲ್ಲಿಗೆ ಕಳುಹಿಸಿತ್ತು. ಈ ಸಂದರ್ಭದಲ್ಲಿ ನಡೆದ ಸಣ್ಣಪುಟ್ಟ ಹೊಡೆದಾಟದಲ್ಲಿ ಎರಡೂ ಕಡೆಗಳ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಬಳಿಕ ಚೀನಿ ಪಡೆಗಳು ಕೂಡಾ ಆ ಪ್ರದೇಶಕ್ಕೆ ಧಾವಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕೂಡಾ ಹೆಚ್ಚುವರಿ ಸೇನಾಪಡೆಗಳನ್ನು ಅಲ್ಲಿ ನಿಯೋಜಿಸಿದೆ.

  1962ರ ಭಾರತ-ಚೀನಾ ಯುದ್ಧದ ಬಳಿಕ ಎರಡೂ ದೇಶಗಳ ಸೇನಾಪಡೆಗಳ ನಡುವೆ ಉಂಟಾಗಿರುವ ಅತ್ಯಂತ ದೀರ್ಘಾವಧಿಯ ಉದ್ವಿಗ್ನ ಸ್ಥಿತಿ ಇದಾಗಿದೆ. 2013ರಲ್ಲಿ ಜಮ್ಮುಕಾಶ್ಮೀರದ ಲಡಾಖ್ ವಿಭಾಗದ ದೌಲತ್ ಬೇಗ್ ಓಲ್ಡಿ ಪ್ರದೇಶದಲ್ಲಿ ಭಾರತದ ಗಡಿಯಿಂದ 30 ಕಿ.ಮೀ.ದೂರದ ಡೆಪ್ಸಾಂಗ್ ಪ್ರಸ್ಥಭೂಮಿವರೆಗೆ ಪ್ರವೇಶಿಸಿದ್ದಾಗಲೂ ಅಲ್ಲಿ ಸುಮಾರು 21 ದಿನಗಳ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಈ ಪ್ರದೇಶವನ್ನು ಕೂಡಾ ಚೀನಾ ತನಗೆ ಸೇರಿದ್ದೆಂದು ವಾದಿಸಿದೆ. ಆದಾಗ್ಯೂ, ಆ ಬಳಿಕ ಚೀನಿ ಪಡೆಗಳು ಹಿಂದಕ್ಕೆ ನಿರ್ಗಮಿಸಿದ್ದವು.
  1976ರಲ್ಲಿ ಸಿಕ್ಕಿಂ ಭಾರತಕ್ಕೆ ಸೇರ್ಪಡೆಗೊಂಡಿತ್ತು. ಚೀನಾದೊಂದಿಗೆ ಗುರುತಿಸಲಾದ ಗಡಿರೇಖೆಯಿರುವ ಏಕೈಕ ರಾಜ್ಯ ಇದಾಗಿದೆ. 1898ರಲ್ಲಿ ಭಾರತ ಹಾಗೂ ಚೀನಾ ನಡುವೆ ಏರ್ಪಟ್ಟಿದ್ದ ಒಪ್ಪಂದವನ್ನು ಆಧರಿಸಿ ಈ ಗಡಿಗಳನ್ನು ಗುರುತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News