ಉ.ಪ್ರ.ಮುಖ್ಯಮಂತ್ರಿಗೆ ನೀಡಲು 125 ಕೆ.ಜಿ.ಸೋಪ್ ಒಯ್ಯುತ್ತಿದ್ದ ಗುಜರಾತ್ ದಲಿತರ ಗುಂಪಿಗೆ ತಡೆ
ಝಾನ್ಸಿ,ಜು.3: ಉತ್ತರ ಪ್ರದೇಶದ ದಲಿತರ ಕುರಿತು ತನ್ನ ಮನೋಸ್ಥಿತಿಯನ್ನು ಸ್ವಚ್ಛಗೊಳಿಸಿಕೊಳ್ಳಲು ಅವರಿಗೆ ಉಡುಗೊರೆಯಾಗಿ ನೀಡಲು, ಬುದ್ಧನ ಚಿತ್ರವನ್ನು ಕೆತ್ತಿದ್ದ 125 ಕೆ.ಜಿ.ತೂಕದ ಸಾಬೂನನ್ನು ಸಾಗಿಸುತ್ತಿದ್ದ ಗುಜರಾತ್‌ನ 45 ದಲಿತ ಪ್ರತಿಭಟನಾ ಕಾರರ ಗುಂಪೊಂದನ್ನು ರವಿವಾರ ಸಂಜೆ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ತಡೆದಿದ್ದಾರೆ.
ಲಕ್ನೋದಲ್ಲಿ ಈ ಗುಂಪಿನ ಉಪಸ್ಥಿತಿ ಶಾಂತಿಭಂಗಕ್ಕೆ ಕಾರಣವಾಗುವ ಆತಂಕದಿಂದ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಕುಷಿ ನಗರದಲ್ಲಿ ನೂರಕ್ಕೂ ಅಧಿಕ ಮುಸಾಹರ್ ದಲಿತ ಕುಟುಂಬಗಳೊಂದಿಗೆ ಆದಿತ್ಯನಾಥರ ಭೇಟಿಯ ಮುನ್ನಾ ದಿನ ಅಧಿಕಾರಿಗಳು ಆ ಕುಟುಂಬಗಳ ಸದಸ್ಯರು ತಮ್ಮನ್ನು ಸ್ವಚ್ಛಗೊಳಿಸಿಕೊಳ್ಳಲು ಶಾಂಪೂ ಮತ್ತು ಸೋಪ್ ಬಾರ್ ಗಳನ್ನು ವಿತರಿಸಿದ್ದರೆಂದು ವರದಿಯಾಗಿದ್ದು, 125 ಕೆ.ಜಿ.ತೂಕದ ಸೋಪ್‌ಬಾರ್‌ನ ಉಡುಗೊರೆಯ ಮೂಲಕ ಇದಕ್ಕೆ ತಿರುಗೇಟು ನೀಡಲು ಗುಜರಾತ್ ದಲಿತರ ಗುಂಪು ಉದ್ದೇಶಿಸಿತ್ತು ಎನ್ನಲಾಗಿದೆ.
ಆದಿತ್ಯನಾಥ ಅವರು ಜನ್ಮದಿಂದ ಮೇಲ್ವರ್ಗವಾದ ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕುಶಿ ನಗರದ ಈ ಘಟನೆಯ ಹಿನ್ನೆಲೆಯಲ್ಲಿ ದೇಶಾದ್ಯಂತದಿಂದ 300ಕ್ಕೂ ಅಧಿಕ ದಲಿತರು ಆದಿತ್ಯನಾಥರಿಗೆ ನೀಡಲು ಸೋಪ್ ಬಾರ್‌ಗಳೊಂದಿಗೆ ಸೋಮವಾರ ಲಕ್ನೋ ದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಿದ್ದರು.
ಪೊಲೀಸರು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಿಂದ ಗುಜರಾತ್ ದಲಿತರ ಗುಂಪನ್ನು ಕೆಳಕ್ಕಿಳಿಸಿದ ಬಳಿಕ ಅವರನ್ನು ಗೆಸ್ಟ್‌ಹೌಸ್‌ವೊಂದರಲ್ಲಿ ಇರಿಸಿದ್ದು,ಸೋಮವಾರ ವಾಪಸ್ ಅವರ ರಾಜ್ಯಕ್ಕೆ ವಾಪಸ್ ಕಳುಹಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಬೇಚಾನ್ ಪ್ರತಿಬಂಧ ಸಮಿತಿಯೊಂದಿಗೆ ಗುರುತಿಸಿ ಕೊಂಡಿರುವ ಈ ಗುಂಪಿನ ಸದಸ್ಯರು ಪೊಲೀಸರು ತಮ್ಮ ಪ್ರಯಾಣವನ್ನು ಮೊಟಕು ಗೊಳಿಸಿದ ಬಳಿಕ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಧರಣಿ ಮುಷ್ಕರವನ್ನು ನಡೆಸಿದ್ದರು.