ವಿವಾಹ ರದ್ದು: ಶಫೀನ್ ಜಹಾನ್ ಸುಪ್ರೀಂಕೋರ್ಟಿಗೆ
ಕೊಚ್ಚಿ,ಜು.3: ಮತಾಂತರಗೊಂಡ ಯುವತಿಯೊಂದಿಗೆ ನಡೆದ ಮದುವೆಯನ್ನು ರದ್ದುಗೊಳಿಸಿದ ಹೈಕೋರ್ಟಿನ ತೀರ್ಪಿನ ವಿರುದ್ಧ ಶಫೀನ್ ಜಹಾನ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಮತಾಂತರಗೊಂಡ ಯುವತಿಯೊಂದಿಗಿನ ಮದುವೆಯನ್ನು ರದ್ದುಪಡಿಸಿ ಯುವತಿಯನ್ನು(ಹಾದಿಯಾ) ತಂದೆ ತಾಯಿಗಳ ಜೊತೆ ಕಳುಹಿಸಿ ಕೊಡಲು ಹೈಕೋರ್ಟು ತೀರ್ಪು ನೀಡಿತ್ತು. ಮದುವೆಯಲ್ಲಿ ತಂದೆ ತಾಯಿ ಉಪಸ್ಥಿತಿಯಿರಲಿಲ್ಲ. ಬೇರೊಬ್ಬರು ಮಹಿಳೆ ಮತ್ತು ಅವರ ಪತಿಯನ್ನು ರಕ್ಷಕರನ್ನಾಗಿ ಮಾಡಿ ನಡೆಸಿದ ಮದುವೆ ‘ಅನೂರ್ಜಿತ’ ಎಂದು ಹೈಕೋರ್ಟು ತೀರ್ಪು ನೀಡಿತ್ತು.
ಮಗಳನ್ನು ನಮಗೊಪ್ಪಿಸಬೇಕೆಂದು ಯುವತಿಯ ತಂದೆ ವೈಕಂ ಅಶೋಕನ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟು ಮದುವೆ ರದ್ದು ಪಡಿಸಿದರೂ ಹಾದಿಯಾ ತಂದೆ ತಾಯಿ ಜೊತೆ ಹೋಗಲು ಒಪ್ಪಿರಲಿಲ್ಲ. ನಂತರ ಪೊಲೀಸರ ನೆರವಿನಲ್ಲಿ ಹಾದಿಯಾಳನ್ನು ತಂದೆ ತಾಯಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ‘ತಾನು ಸ್ವಇಚ್ಛೆಯಿಂದ ಮತಾಂತರಗೊಂಡಿದ್ದೇನೆ ತನಗೆ ಮನೆಗೆ ಹೋಗಬೇಕಿಲ್ಲ’ ಎಂದುಹಾದಿಯಾ ಮಾಧ್ಯಮಗಳಿಗೆ ತಿಳಿಸಿದ್ದಳು.