ಬದೂರಿಯ ಕೋಮುಗಲಭೆಯಲ್ಲಿ ಹಿಂದೂ ಯುವಕನ ನೆರವಿಗೆ ಧಾವಿಸಿದ ಮುಸ್ಲಿಮರು

Update: 2017-07-08 14:57 GMT

ಕೋಲ್ಕತಾ, ಜು.8: ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಸುದ್ದಿಯೊಂದು ಕೋಮುಗಲಭೆಗೆ ಕಾರಣವಾದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ. ಈ ಕೋಮುಗಲಭೆಯ ಮಧ್ಯೆಯೂ ಹಿಂದೂ ಯುವಕನ ನೆರವಿಗೆ ಧಾವಿಸಿದ ಮುಸ್ಲಿಮರು ಸೌಹಾರ್ದತೆ ಮೆರೆದಿದ್ದಾರೆ.

  ಪ.ಬಂಗಾಲದ ಬದೂರಿಯ ಎಂಬ ಗ್ರಾಮದಲ್ಲಿ ಇದುವರೆಗೂ ಕೋಮುಗಲಭೆ ನಡೆದೇ ಇಲ್ಲ. ಅಷ್ಟೊಂದು ಸೌಹಾರ್ದತೆಯಿಂದ ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಬದುಕುತ್ತಿದ್ದಾರೆ. ಸಂಜೆಯ ವೇಳೆ ಹಿಂದೂಗಳ ಮನೆಯಲ್ಲಿ ಭಜನೆ ಸಂಕೀರ್ತನೆ ಕೇಳಿ ಬಂದರೆ ಅದೇ ಸಂದರ್ಭ ಮಸೀದಿಯಿಂದ ‘ಅಝಾನ್’ ಕರೆ ಮೊಳಗಿದರೂ ಯಾರೊಬ್ಬರೂ ಅಪಸ್ವರ ಎತ್ತುವುದಿಲ್ಲ.

    ಆದರೆ ಇತ್ತೀಚೆಗೆ ಗ್ರಾಮದ ಸೌವಿಕ್ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿಯ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿ ಕೋಮು ಗಲಭೆಯ ರೂಪು ಪಡೆಯಿತು. ಈ ವೇಳೆ ಸುಮಾರು 300 ಜನರಿದ್ದ ಗುಂಪೊಂದು ಸೌವಿಕ್ ಮೇಲೆ ಹಲ್ಲೆ ನಡೆಸಲು ಆತನ ಮಾವ ಬಬ್ಲೂ ಸರ್ಕಾರ್ ಎಂಬವರ ಮನೆಮೇಲೆ ದಾಳಿ ನಡೆಸಿ, ಸೌವಿಕ್‌ಗಾಗಿ ಹುಡುಕಾಟ ನಡೆಸುತ್ತಾ ಮನೆಯಲ್ಲಿ ರಾದ್ದಾಂತ ಎಬ್ಬಿಸಿತ್ತು.
 ವಿಷಯ ಅರಿತ ಮಗುರ್‌ಖೊಲ ಮಿಲನ್ ಮಸ್ಜಿದ್ ಸಮಿತಿಯ ಅಧ್ಯಕ್ಷ ಅಮಿರುಲ್ ಇಸ್ಲಾಂ ತಕ್ಷಣ ಸೌವಿಕ್‌ನ ಮನೆಯತ್ತ ಧಾವಿಸಿದ್ದು ಅಲ್ಲಿ ದಾಂಧಲೆ ನಡೆಸುತ್ತಿದ್ದ ಗುಂಪನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಗುಂಪಿನ ಕೆಲವರು ಮನೆಗೆ ಬೆಂಕಿ ಇಟ್ಟಿದ್ದಾರೆ. ತಕ್ಷಣ ಮಕ್ಸುದ್ ಎಂಬಾತನ ನೆರವು ಪಡೆದ ಅಮಿರುಲ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಅವರ ನೆರವಿನಿಂದ ಬೆಂಕಿ ನಂದಿಸಿ ಮನೆಯನ್ನು ಉಳಿಸಿದ್ದಾರೆ. ಬಳಿಕ ಗ್ರಾಮಸ್ಥರ ನೆರವು ಪಡೆದು ಹಲ್ಲೆಕೋರ ಗುಂಪನ್ನು ಊರಿಂದಾಚೆ ಓಡಿಸುವಲ್ಲಿ ಅಮಿರುಲ್ ಯಶಸ್ವಿಯಾಗಿದ್ದಾರೆ.

ಸೌವಿಕ್ ಉತ್ತಮ ಹುಡುಗನಾಗಿದ್ದು ಈ ಘಟನೆ ನಡೆದಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಶಿಕ್ಷಕ ತಪನ್ ಹಲ್ದರ್ ಹೇಳಿದ್ದಾರೆ. ಇದುವರೆಗೆ ಗ್ರಾಮದಲ್ಲಿ ಕೋಮುಗಲಭೆ ಸಂಭವಿಸಿಲ್ಲ ಎಂದು ಗ್ರಾಮದ ಹಿರಿಯ ವ್ಯಕ್ತಿ ರಫೀಕುಲ್ ಇಸ್ಲಾಂ ಹೇಳುತ್ತಾರೆ. ಘಟನೆಗೆ ಕಾರಣವಾದ ವಿಷಯ ಯಾವುದೇ ಇರಲಿ, ಇಲ್ಲಿ ಎರಡೂ ಸಮುದಾಯದವರು ಸೌವಿಕ್‌ನ ನೆರವಿಗೆ ನಿಂತಿರುವುದು ಗಮನಾರ್ಹವಾಗಿದೆ. ಅಂದರೆ ಎರಡೂ ಸಮುದಾಯದವರೂ ಸೌವಿಕ್‌ನನ್ನು ಬೆಂಬಲಿಸಿದ್ದಾರೆ. ಹಾಗಾದರೆ ಕೋಮುಗಲಭೆ ಹುಟ್ಟಿಸಿ, ಸೌವಿಕ್ ಮನೆಗೆ ಬೆಂಕಿ ಇಟ್ಟವರು , ಬದೂರಿಯ ಗ್ರಾಮದ ಶಾಂತಿ ಸೌಹಾರ್ದತೆಗೆ ಕೊಳ್ಳಿ ಇಡಲು ಪ್ರಯತ್ನಿಸಿದವರು ಯಾವ ಸಮುದಾಯದವರು ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News