ಡಾರ್ಜಿಲಿಂಗ್‌ನಲ್ಲಿ ಮತ್ತೆ ಹಿಂಸಾಚಾರ: ಇಬ್ಬರು ಬಲಿ

Update: 2017-07-08 15:39 GMT

ಸಿಲಿಗುರಿ, ಜು. 8: ಗೂರ್ಖಾಲ್ಯಾಂಡ್‌ಗಾಗಿ ಗೂರ್ಖಾ ಜನಮುಕ್ತಿ ಮೋರ್ಚಾ ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ಈ ನಡುವೆ ಡಾರ್ಜಿಲಿಂಗ್‌ನಲ್ಲಿ ಶನಿವಾರ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಇದರಿಂದ ಹೋರಾಟ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ.

ಇಬ್ಬರಲ್ಲದೆ ಇನ್ನೊಬ್ಬ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆ. ಆದರೆ, ಅಧಿಕಾರಿಗಳು ಇನ್ನಷ್ಟೇ ದೃಢೀಕರಿಸಬೇಕು ಎಂದು ಜಿಜೆಎಂ ಹೇಳಿದೆ.

ಕಳೆದ ಎರಡು ತಿಂಗಳಿಂದ ಗೂರ್ಖಾಲ್ಯಾಂಡ್ ಹೋರಾಟ ನಡೆಯುತ್ತಿರುವ ಜಿಲ್ಲೆಗಳಲ್ಲಿದ್ದ ಸೇನಾ ಪಡೆಯನ್ನು ಪಶ್ಚಿಮ ಬಂಗಾಳ ಹಿಂದೆ ಕಳುಹಿಸಿದ ಬಳಿಕ ಈಗ ಮತ್ತೆ ಆಗಮಿಸುವಂತೆ ಕೋರಿದೆ.

ಟಶಿ ಭುಟಿಯಾ ಸೊನದಾದಲ್ಲಿ ಶುಕ್ರವಾರ ರಾತ್ರಿ ಗುಂಡಿಗೆ ಬಲಿಯಾಗಿದ್ದಾರೆ. ಮರುದಿನ ಡಾರ್ಜಿಲಿಂಗ್‌ನಲ್ಲಿ ಸೂರಜ್ ಸುಂದಾಸ್ ಹತಾರಾಗಿದ್ದಾರೆ. 40 ಹರೆಯದ ಸಮೀರ್ ಗುರುಂಗ್ ಶನಿವಾರ ಮೃತಪಟ್ಟಿದ್ದಾನೆ ಎಂದು ಜಿಜೆಎಂ ತಿಳಿಸಿದೆ.

ಡಾರ್ಜಿಲಿಂಗ್‌ನಲ್ಲಿ ಹತ್ಯೆಗೀಡಾದ ಸೂರಜ್ ಸುಂದಾಸ್‌ನಿಗೆ ಶ್ರದ್ದಾಂಜಲಿ ಸಲ್ಲಿಸಲು ತೆರಳುತ್ತಿದ್ದಾಗ ಸಮೀರ್ ತಲೆಗೆ ಗುಂಡು ಹಾರಿಸಲಾಗಿದೆ. ಗುರುಂಗ್ ಅನ್ನು ಸಿಂಗಮರಿಯಲ್ಲಿ ಕೇಂದ್ರ ಮೀಸಲು ಪಡೆಯ ಪೊಲೀಸರು ಗುಂಡು ಹಾರಿಸೆ ಹತ್ಯೆಗೈದಿರಬೇಕು. ಗುಂಡು ಹಾರಿಸುವ ಮೂಲಕ ಹೋರಾಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಆಡಳಿತ ಪಕ್ಷಕ್ಕೆ ತಿಳಿದಿರಲಿ ಎಂದು ಗೂರ್ಖಾ ಜನಮುಕ್ತಿ ಮೋರ್ಚಾದ ಅಧ್ಯಕ್ಷ ಪ್ರಕಾಶ್ ಗುರುಂಗ್ ಹೇಳಿದ್ದಾರೆ.

ಸೊನಾದಾ ಘಟನೆಯನ್ನು ಆಕಸ್ಮಿಕ ಎಂದಿರುವ ರಾಜ್ಯ ಸರಕಾರ, ಇತರ ಸಾವುಗಳೊಂದಿಗೆ ಸೋನಾದಾ ಘಟನೆಯನ್ನು ಉಲ್ಲೇಖಿಸುವಂತಿಲ್ಲ ಎಂದಿದೆ.

 ಈ ಘಟನೆಗಳ ಹಿನ್ನೆಲೆಯಲ್ಲಿ ಮಕ್ಕಳ ರೈಲು ಎಂದು ಕರೆಯಲಾಗುವ ಡಾರ್ಜಿಲಿಂಗ್ ಹಿಮಾಲಯ ರೈಲ್ವೇ ನಿಲ್ದಾಣವನ್ನು ಗುರಿಯಾಗಿರಿಸಿ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ. ಅಲ್ಲಿನ ಪೀಠೋಪಕರಣ, ನಿರೀಕ್ಷಣಾ ಕೊಠಡಿಗೆ ಬೆಂಕಿ ಹಚ್ಚಿದ್ದಾರೆ.

ಅಪರಾಹ್ನ ಪ್ರತಿಭಟನಕಾರರು ಎರಡು ವಾಹನಗಳಿಗೆ ಬೆಂಕಿ ಹಚ್ಚಿದರು. ಕಿಲಿಂಪೋಂಗ್‌ನ ಗೋರುಬತಾನ್‌ನಲ್ಲಿರುವ ಅರಣ್ಯ ವಲಯಾಧಿಕಾರಿಗಳ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚಿದರು. ವಲಯ ಅರಣ್ಯಾಧಿಕಾರಿ ಕಚೇರಿಗೆ ಕೂಡ ಬೆಂಕಿ ಹಚ್ಚಲು ಪ್ರಯತ್ನಿಸಿದರು.

ಜಾರ್ಜ್ ನಗರದಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚುವ ಮೊದಲು ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪ್ರತಿಯಾಗಿ ಪೊಲೀಸರು ಅಶ್ರುವಾಯ ಶೆಲ್ ಸಿಡಿಸಿದರು. ಹಾಗೂ ರಬ್ಬರ್ ಬುಲೆಟ್‌ಗಳನ್ನು ಹಾರಿಸಿದರು.

ಉತ್ತರ 24 ಪರಗಣದ ಬಸಿರ್ಹಾತ್‌ನಲ್ಲಿ ಕೋಮ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಈ ಹಿಂಸಾಚಾರ ಇನ್ನೊಂದು ಸವಾಲಾಗಿದೆ. ಡಾರ್ಜಿಲಿಂಗ್ ಹಾಗೂ ಬಸಿರ್ಹಾತ್‌ನಲ್ಲಿ ಹಿಂಸಾಚಾರಕ್ಕೆ ಬಿಜೆಪಿ ಉತ್ತೇಜಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News