ಮಹಿಳೆಯರ ವಿಶ್ವಕಪ್ : ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಸೆಮಿಫೈನಲ್ ಗೆ
ಲಂಡನ್, ಜು.13: ಮಹಿಳೆಯರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ಸೆಮಿಫೈನಲ್ ಪ್ರವೇಶಿಸಿವೆ.
ಕಳೆದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 75 ರನ್‌ಗಳ ಗೆಲುವು ದಾಖಲಿಸಿದ್ದ ಆತಿಥೇಯ ಇಂಗ್ಲೆಂಡ್, ಭಾರತದ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿದ್ದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿದ್ದ ದಕ್ಷಿಣ ಆಫ್ರಿಕ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಲಾ 10 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿವೆೆ. ದಕ್ಷಿಣ ಆಫ್ರಿಕ 9 ಅಂಕಗಳೊಂದಿಗೆ 3ನೆ ಸ್ಥಾನ ಗಳಿಸಿದೆ.
ಭಾರತ 8 ಮತ್ತು ನ್ಯೂಝಿಲೆಂಡ್ 7 ಪಾಯಿಂಟ್‌ಗಳನ್ನು ಪಡೆದಿದ್ದು, ಶನಿವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಇವೆರಡು ತಂಡಗಳು ಹಣಾಹಣಿ ನಡೆಸಲಿವೆ. ಗೆದ್ದ ತಂಡ ಸೆಮಿಫೈನಲ್‌ನಲ್ಲಿ ಆಡುವ ಅವಕಾಶ ಪಡೆಯಲಿದೆ.
ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನಿಂಗ್ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 79 ರನ್ ಗಳಿಸಿ ಭಾರತದ ವಿರುದ್ಧ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು. ಮೆಗಾನ್ ಷಟ್ ಮತ್ತು ಎಲ್ಲಿಸ್ ಪೆರ್ರಿ ತಲಾ 2 ವಿಕೆಟ್ ಉಡಾಯಿಸಿ ಭಾರತದ ಸ್ಕೋರ್‌ನ್ನು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 226ಕ್ಕೆ ನಿಯಂತ್ರಿಸಿದ್ದರು.