×
Ad

ಭಾರತದ ಮೊದಲ ಸೌರಶಕ್ತಿ ರೈಲು ಆರಂಭ

Update: 2017-07-14 20:50 IST

ಹೊಸದಿಲ್ಲಿ, ಜು. 13: ದೇಶದ ಮೊದಲ ಸೌರ ಶಕ್ತಿ ಹೊಂದಿದ ಡೆಮು ರೈಲು (ಡೀಸೆಲ್ ಎಲೆಕ್ಟಿಕಲ್ ಮಲ್ಟಿಪಲ್ ಯೂನಿಟ್)ನ್ನು ಭಾರತೀಯ ರೈಲ್ವೇ ಇಂದು ಲೋಕಾರ್ಪಣೆಗೊಳಿಸಿತು. ಡೆಮು ಬೋಗಿಯ ಮಾಡಿಗೆ ಅಳವಡಿಸಲಾದ ಸೌರ ಫಲಕಗಳು ಬೋಗಿಗಳ ಲೈಟ್, ಫ್ಯಾನ್ ಹಾಗೂ ಪ್ರದರ್ಶನ ವ್ಯವಸ್ಥೆಗಳಿಗೆ ಬೇಕಾದ ಸಂಪೂರ್ಣ ವಿದ್ಯುತ್ ಒದಗಿಸುತ್ತದೆ.

ಈ ರೈಲು ದಿಲ್ಲಿಯ ಸರೈ ರೋಹಿಲ್ಲಾದಿಂದ ಹರ್ಯಾಣದ ಫಾರೂಕ್ ನಗರದ ವರೆಗೆ ಸಂಚರಿಸಲಿದೆ. ಈ ರೈಲಿನಲ್ಲಿ ಒಟ್ಟು 16 ಸೌರ ಫಲಕಗಳಿವೆ. ಪ್ರತಿ ಫಲಕ 300 ಡಬ್ಲು. ಪಿ. ವಿದ್ಯುತ್ ಉತ್ಪಾದಿಸಲಿದೆ. ಇದನ್ನು ಆರು ಬೋಗಿಗಳಿಗೆ ಅಳವಡಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ 54 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೌರ ಫಲಕಗಳನ್ನು ಉತ್ಪಾದಿಸಲಾಗಿದೆ. ರೈಲ್ವೇ ಗ್ರಿಡ್‌ಗಳಿಗೆ ಸೌರ ಫಲಕಗಳನ್ನು ಅಳವಡಿಸುವುದು ಜಗತ್ತಿನಲ್ಲಿ ಇದೇ ಮೊದಲು. ಕಳೆದ ವರ್ಷ ರೈಲ್ವೇ ಬಜೆಟ್ ಸಂದರ್ಭ, ರೈಲ್ವೇ ಸಚಿವ ಸುರೇಶ್ ಪ್ರಭು, ಮುಂದಿನ ಐದು ವರ್ಷಗಳಲ್ಲಿ ರೈಲ್ವೇ 1 ಸಾವಿರ ಮೆಗಾವ್ಯಾಟ್ ಸೌರ ಶಕ್ತಿ ಉತ್ಪಾದಿಸಲಿದೆ ಎಂದು ಹೇಳಿದ್ದರು.

ಸೌರ ಶಕ್ತಿ ಹೊಂದಿದ ಈ ಡೆಮು ರೈಲು ಯೋಜನೆಯ ಭಾಗ. ಶುದ್ದ ಹಾಗೂ ಮರುಬಳಕೆಯ ಇಂಧನಕ್ಕೆ ಉತ್ತೇಜನ ನೀಡಲು ಭಾರತೀಯ ರೈಲ್ವೇ ಬದ್ಧವಾಗಿದೆ ಎಂದು ಸೌರ ಶಕ್ತಿ ಹೊಂದಿದ ರೈಲನ್ನು ಲೋಕಾರ್ಪಣೆಗೊಳಿಸುವ ಸಂದರ್ಭ ಸುರೇಶ್ ಪ್ರಭು ಹೇಳಿದ್ದಾರೆ. ಇಂತಹ 50ಕ್ಕೂ ಹೆಚ್ಚು ಬೋಗಿಗಳನ್ನು ಪರಿಚಯಿಸಲು ರೈಲ್ವೇ ಯೋಜನೆ ರೂಪಿಸಿದೆ.

ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾದರೆ, ಭಾರತೀಯ ರೈಲ್ವೇಗೆ 700 ಸಾವಿರ ಕೋಟಿ ರೂ. ಲಾಭವಾಗಲಿದೆ ಎಂದು ಭಾರತೀಯ ರೈಲ್ವೇಯ ಪರ್ಯಾಯ ಇಂಧನಕ್ಕಿರುವ ಸಂಘಟನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದರ್ ಗುಪ್ತಾ ಹೇಳದ್ದಾರೆ. ಇದರಿಂದ ರೈಲ್ವೇ ಮಂದಿನ 25 ವರ್ಷಗಳಲ್ಲಿ 5.25 ಲಕ್ಷ ಲೀಟರ್ ಡೀಸೆಲ್ ಉಳಿಸಲಿದೆ. ಇದೇ ಅವಧಿಯಲ್ಲಿ ಒಂದು ರೈಲಿನಿಂದ 3 ಕೋಟಿ ರೂ. ಉಳಿತಾಯವಾಗಲಿದೆ. 25 ವರ್ಷಗಳಲ್ಲಿ 1,350 ಟನ್ ಕಾರ್ಬನ್ ಡಯಾಕ್ಸೈಡ್ ಬಿಡುಗಡೆಯಾಗುವುದು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News